ತುಮಕೂರು: ತಾಪಂ ಅಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಆಪರೇಷನ್‌ಗೆ ರಿವರ್ಸ್ ಆಪರೇಷನ್ ಮಾಡುವಲ್ಲಿ ಜೆಡಿಎಸ್ ಯಶಸ್ವಿಯಾಯಿತಾದರೂ ಅಧಿಕಾರ ಹಿಡಿಯಲು ಸಾಧ್ಯವಾಗಲಿಲ್ಲ. ಉಳಿದ 10 ತಿಂಗಳ ಅವಧಿಗೆ ಬಿಜೆಪಿಯ ಅರಕೆರೆ ಕ್ಷೇತ್ರದ ಎನ್.ಇ.ಕವಿತಾ ಅಧ್ಯಕ್ಷರಾಗಿ ಚುನಾಯಿತರಾದರು.
ಕಳೆದ ತಿಂಗಳು ಗಂಗಾಂಜನೇಯ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಕವಿತಾ ಅವರು 15-13 ಮತಗಳಿಂದ ಜೆಡಿಎಸ್‌ನ ಹೆತ್ತೇನಹಳ್ಳಿ ಕ್ಷೇತ್ರದ ಸದಸ್ಯ ಶಿವಕುಮಾರ್ ವಿರುದ್ಧ ಜಯಗಳಿಸಿದರು. 30 ಸದಸ್ಯ ಬಲವುಳ್ಳ ತಾಪಂನಲ್ಲಿ 28 ಸದಸ್ಯರು ಮಾತ್ರ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು.
ಬಿಜೆಪಿಯ ಕೋರಾ ಸದಸ್ಯೆ ಕವಿತಾ ಹಾಗೂ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಕುರುವೇಲು ಕ್ಷೇತ್ರದ ಸುಧಾ ಅವರು ಜೆಡಿಎಸ್ ಅಭ್ಯರ್ಥಿ ಶಿವಕುಮಾರ್‌ಗೆ ‘ಕೈ’ ಎತ್ತುವ ಮೂಲಕ ಪಕ್ಷದ ಜಿಲ್ಲಾಧ್ಯಕ್ಷರ ವಿರುದ್ಧ ಬಹಿರಂಗವಾಗಿ ತೊಡೆತಟ್ಟಿದರು. ಕಾಂಗ್ರೆಸ್‌ನ ಸಿರಿವರ ಕ್ಷೇತ್ರದ ರಂಗಸ್ವಾಮಯ್ಯ ಕೂಡ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಿದರು. ಜೆಡಿಎಸ್‌ನ ಕೆಸ್ತೂರು ಕ್ಷೇತ್ರದ ನೇತ್ರಾವತಿ, ಬಿಟ್ಟನಕುರ್ಕೆಯ ಮಂಜುನಾಥ್ ‘ಗೈರು’ ಆಗುವ ಮೂಲಕ ಪರೋಕ್ಷವಾಗಿ ಬಿಜೆಪಿ ಬೆಂಬಲಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶಗೌಡಗೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಚುನಾವಣಾ ಅಧಿಕಾರಿಯಾಗಿದ್ದ ತುಮಕೂರು ಉಪವಿಭಾಗಾಧಿಕಾರಿ ವಿ.ಅಜಯ್ ಫಲಿತಾಂಶ ಘೋಷಿಸಿದರು.
ಬಿಜೆಪಿ ಆಪರೇಷನ್: 17 ಸದಸ್ಯರನ್ನು ಹೊಂದಿರುವ ಬಿಜೆಪಿಗೆ ತುಮಕೂರು ತಾಪಂನಲ್ಲಿ ಸ್ಪಷ್ಟ ಬಹುಮತವಿದ್ದರೂ ಪಕ್ಷದೊಳಗಿನ ಆಂತರಿಕ ಭಿನ್ನಮತ, ಮಾಜಿ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷರ ವಿರುದ್ಧದ ಆಕ್ರೋಶ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಅಧಿಕಾರಕ್ಕೆ ಕಂಟಕ ಎದುರಾಗಿತ್ತು. ಹಾಗಾಗಿ, ಈ ಚುನಾವಣೆ ಮತ್ತೊಮ್ಮೆ ಗ್ರಾಮಾಂತರ ಕ್ಷೇತ್ರದಲ್ಲಿ ರಾಜಕೀಯ ಜಿದ್ದಾಜಿದ್ದಿಗೆ ವೇದಿಕೆ ಒದಗಿಸಿತ್ತು.
ಬಿಜೆಪಿ ಭಿನ್ನಮತ ಅಸ್ತ್ರವನ್ನಾಗಿಟ್ಟುಕೊಂಡು ತಾಪಂ ಅನ್ನು ತೆಕ್ಕೆಗೆ ತೆಗೆದುಕೊಳ್ಳಬಹುದೆಂಬ ಜೆಡಿಎಸ್ ಶಾಸಕ ಡಿ.ಸಿ.ಗೌರಿಶಂಕರ್ ಲೆಕ್ಕಾಚಾರವೂ ತಲೆಕೆಳಗಾಯಿತು. ಚುನಾವಣೆಗೆ 2 ದಿನ ಮುನ್ನವೇ 12 ಸದಸ್ಯಬಲವುಳ್ಳ ಜೆಡಿಎಸ್ ಶಕ್ತಿಯನ್ನು ಬಿಜೆಪಿ ಕುಂದಿಸುವಲ್ಲಿ ಯಶಸ್ವಿಯಾಯಿತು. ಕೆಸ್ತೂರಿನ ನೇತ್ರಾವತಿ, ಬಿಟ್ಟನಕುರಿಕೆಯ ಮಂಜುನಾಥ್ ಅವರನ್ನು ‘ಆಪರೇಷನ್ ಬಿಜೆಪಿ’ ಮೂಲಕ ಸೆಳೆದು ಜೆಡಿಎಸ್‌ಗೆ ಆಘಾತ ನೀಡಿತ್ತು. ಜೆಡಿಎಸ್ ಸಂಖ್ಯಾಬಲ 10ಕ್ಕೆ ಕುಸಿಯಿತು.
ರಿವರ್ಸ್ ಆಪರೇಷನ್: ಇದಕ್ಕೆ ಪ್ರತಿಯಾಗಿ ಜೆಡಿಎಸ್ ರಿವರ್ಸ್ ಆಪರೇಷನ್‌ಗೆ ಕೈಹಾಕಿತು. ಭಿನ್ನಮತವನ್ನೇ ಅಸ್ತ್ರವಾಗಿಟ್ಟುಕೊಂಡು ಬಿಜೆಪಿಯ ಕೋರಾ ಹಾಗೂ ಕುರುವೇಲು ಕ್ಷೇತ್ರದ ಸದಸ್ಯರನ್ನು ತನ್ನತ್ತ ಸೆಳೆದುಕೊಂಡಿತು. ಪ್ರತಿಯಾಗಿ ರಾಜಕೀಯ ದಾಳ ಉರುಳಿಸಿದ ಜೆಡಿಎಸ್‌ಗೆ ಪಕ್ಷದ ಸದಸ್ಯರಿಬ್ಬರೇ ಕೈಕೊಟ್ಟರು. ಹಾಗಾಗಿ, ಜೆಡಿಎಸ್‌ಗೆ ಹಿನ್ನೆಡೆಯಾಯಿತು.
ಚುನಾವಣಾ ಪ್ರಕ್ರಿಯೆ: ಗುರುವಾರ ಚುನಾವಣೆ ಪ್ರಕ್ರಿಯೆ ಬೆಳಗ್ಗೆ 11ಕ್ಕೆ ಆರಂಭವಾಯಿತು. ಮಧ್ಯಾಹ್ನ 12ರವರೆಗೆ ನಾಮಪತ್ರ ಸಲ್ಲಿಸಲು ಸಮಯಾವಕಾಶ ನೀಡಲಾಗಿತ್ತು. ಬಿಜೆಪಿಯ ಎನ್.ಇ.ಕವಿತಾ ಎಲ್ಲ ಸದಸ್ಯರ ಜತೆಗೆ ಬಂದು ನಾಮಪತ್ರ ಸಲ್ಲಿಸಿದರು. ಜೆಡಿಎಸ್‌ನ ಹೆತ್ತೇನಹಳ್ಳಿ ಶಿವಕುಮಾರ್ ನಾಮಪತ್ರ ಸಲ್ಲಿಸುವುದರೊಂದಿಗೆ ಚುನಾವಣೆ ರಂಗೇರಿತು. ಮಧ್ಯಾಹ್ನ 2ಕ್ಕೆ ಚುನಾವಣೆ ಪ್ರಕ್ರಿಯೆ ಆರಂಭವಾಯಿತು. 2 ರಿಂದ 2.15ರವರೆಗೆ ನಾಮಪತ್ರ ಪರಿಶೀಲನೆ ನಡೆಯಿತು. ಈ ಸಂದರ್ಭದಲ್ಲಿ ಯಾರೊಬ್ಬರೂ ನಾಮಪತ್ರ ಹಿಂಪಡೆಯದಿದ್ದಾಗ ಚುನಾವಣೆ ನಡೆಸಲಾಯಿತು. ಕೈಎತ್ತುವ ಮೂಲಕ ಆಯ್ಕೆ ಮಾಡಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಸೆಡ್ಡು!: ಕೋರಾ ಕ್ಷೇತ್ರದ ಕವಿತಾ ಹಾಗೂ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ಕುರುವೇಲು ಕ್ಷೇತ್ರದ ಸುಧಾ ಜೆಡಿಎಸ್‌ಗೆ ಮತ ಹಾಕುವ ಮೂಲಕ ಮಾಜಿ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶಗೌಡಗೆ ಸೆಡ್ಡು ಹೊಡೆದಿದ್ದು ಪಕ್ಷದೊಳಗೆ ಎಲ್ಲವೂ ಸರಿಇಲ್ಲ ಎಂಬುದಕ್ಕೆ ಸಾಕ್ಷಿಯಾಗಿತ್ತು.
ಈ ಹಿಂದೆ ಬಿಜೆಪಿ ಶಾಸಕರಿದ್ದ ಅವಧಿಯಲ್ಲಿ ಕಾಲಕಸದಂತೆ ನಮ್ಮನ್ನು ನಡೆಸಿಕೊಂಡರು. ಕಾಡಿಬೇಡಿದರೂ ನಮ್ಮ ಕ್ಷೇತ್ರಕ್ಕೆ ಅನುದಾನ ನೀಡಲಿಲ್ಲ. ಜೆಡಿಎಸ್ ಶಾಸಕ ಗೌರಿಶಂಕರ್ ಅವರು ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಕೊಟ್ಟಿದ್ದಾರೆ. ಅಭಿವೃದ್ಧಿಗಾಗಿ ಜೆಡಿಎಸ್‌ಗೆ ಮತ ನೀಡಿದ್ದೇನೆ. ಎನ್.ಇ.ಕವಿತಾ ಬಿಜೆಪಿ ಬಂಡಾಯ ಸದಸ್ಯೆ