ಕವಿತಾಳ್ ಮುಖ್ಯ ರಸ್ತೆಯಲ್ಲಿ ಭೀಮ ಆರ್ಮಿ ಸಂಘಟನೆಯ ಮಹಿಳಾ ಸದಸ್ಯರು ಭತ್ತ ನಾಟಿ ಮಾಡಿ ಬುಧವಾರ ಪ್ರತಿಭಟನೆ ನಡೆಸಿದರು. ಪ್ರಮುಖರಾದ ಮರಿಯಮ್ಮ ಹೆಸರೂರು, ಯಲ್ಲಮ್ಮ ತೆಲಗರ್, ಗೌರಮ್ಮ ಕೆಳಗೇರ, ದುರುಗಮ್ಮ ಬುಳ್ಳಪುರ ಇತರರಿದ್ದರು. 
ಜಿಲ್ಲೆ

ಹದಗೆಟ್ಟ ರಸ್ತೆ ಮಧ್ಯೆ ಸಸಿ ನಾಟಿ ಪ್ರತಿಭಟನೆ

ಪ್ರವೀಣ ಉದುಸಾ ದಲಬಂಜನ್

ಕವಿತಾಳ: ರಸ್ತೆ ದುರಸ್ತಿ ಮಾಡಬೇಕೆಂದು ಒತ್ತಾಯಿಸಿ ಭೀಮ್ ಆರ್ಮಿ ಸಂಘಟನೆ ಮುಖಂಡರು ಪಟ್ಟಣದ ಮುಖ್ಯ ರೋಡ್‌ನಲ್ಲಿ ಭತ್ತದ ಸಸಿ ನಾಟಿ ಮಾಡಿ ಬುಧವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಮೂಲಕ ಹಾದು ಹೋಗಿರುವ ರಾಯಚೂರು-ಬೆಳಗಾವಿ ಮುಖ್ಯ ರಸ್ತೆ ಹದಗೆಟ್ಟಿದೆ. ಪೊಲೀಸ್ ಠಾಣೆಯಿಂದ ತ್ರಯಂಬಕೇಶ್ವರ ಮಳಿಗೆವರೆಗಿನ ಮುಖ್ಯರಸ್ತೆಯಲ್ಲಿ ಪ್ರಯಾಣಿಕರು ಜೀವಭಯದಿಂದ ಸಂಚರಿಸುವಂತಾಗಿದೆ. ನಿರಂತರ ಮಳೆಯಿಂದ ರಸ್ತೆ ಗುಂಡಿಗಳಲ್ಲಿ ನೀರು ತುಂಬಿದ್ದು, ವಾಹನ ಸವಾರರಿಗೆ ಸಮಸ್ಯೆ ಎದುರಾಗಿದೆ. ಇದರ ಬಗ್ಗೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಕೇಳಿದರೆ ಮಳೆ ಬಂದ ಕಾರಣ ರಸ್ತೆ ಕಾಮಗಾರಿ ನಿಲ್ಲಿಸಲಾಗುತ್ತಿದೆ ಎಂದು ಸಬೂಬು ಹೇಳುತ್ತಿದ್ದಾರೆ. ಆದರೆ ಮಳೆ ಬರುವ ಮುಂಚೆ ರಸ್ತೆಯನ್ನು ಮಾಡಬೇಕಾಗಿತ್ತು. ವಾರದಿಂದ ರಸ್ತೆ ದಾಟಲು ಪರದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಅಧ್ಯಕ್ಷೆ ಯಲ್ಲಮ್ಮ ತೆಲಗರ್ ಮಾತನಾಡಿ, ಪಟ್ಟಣ ಮತ್ತು ಸುತ್ತಲಿನ ಜನರು ಇದೇ ಮಾರ್ಗವಾಗಿ ಸಂಚರಿಸುತ್ತಾರೆ. ಅಧಿಕಾರಿಗಳು ಬರುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ಪಟ್ಟು ಹಿಡಿದರು. ಇದರಿಂದ ಗಂಟೆಗೆ ಹೆಚ್ಚು ಕಾಲ ರಸ್ತೆ ಸಂಚಾರಕ್ಕೆ ತೊಂದರೆಯಾಯಿತು. ಪೊಲೀಸರು ಅಧಿಕಾರಿಗಳೊಂದಿಗೆ ಮಾತನಾಡಿ ಪರಿಸ್ಥಿತಿ ತಿಳಿಗೊಳಿಸಿದರು.

ಸಂಘದ ಗೌರವ ಅಧ್ಯಕ್ಷೆ ಮರಿಯಮ್ಮ ಹೆಸರೂರು, ಉಪಾಧ್ಯಕ್ಷೆ ಗೌರಮ್ಮ ಕೆಳಗೇರ, ಪ್ರಧಾನ ಕಾರ್ಯದರ್ಶಿ ದುರುಗಮ್ಮ ಬುಳ್ಳಪುರ, ಸಂಘಟನಾ ಕಾರ್ಯದರ್ಶಿ ಚಿನ್ನಮ್ಮ ಮ್ಯಾಗಳಮನಿ, ಸಹ ಕಾರ್ಯದರ್ಶಿ ಲಕ್ಷ್ಮೀ ಬುಳ್ಳಪುರ, ಖಜಾಂಚಿ ಮುತ್ತಮ್ಮ , ಭೀಮ್ ಆರ್ಮಿ ಕವಿತಾಳ ಹೋಬಳಿ ಅಧ್ಯಕ್ಷ ಆಜಪ್ಪ ಬುಳ್ಳಪುರ, ಉಪಾಧ್ಯಕ್ಷ ಬಸವರಾಜ ಕೆಳಗೇರ, ಪ್ರಧಾನ ಕಾರ್ಯದರ್ಶಿ ಸಮೀರ್ ಪಾಷಾ, ಸಹ ಕಾರ್ಯದರ್ಶಿ ಮೌನೇಶ ಛಲವಾದಿ, ಸಂಘಟನೆ ಕಾರ್ಯದರ್ಶಿ ರಾಘವೇಂದ್ರ, ಖಜಾಂಚಿ ತಿಮ್ಮಣ್ಣ ತೆಲಗರ್ ಇತರರಿದ್ದರು.