ಊರಿಗೆ ತೆರಳಲು ಕವಿತಾಳ ಬಸ್ ನಿಲ್ದಾಣದಲ್ಲಿ ಸೋಮವಾರ ಸಂಜೆ ಬಸ್‌ಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳು.  
ಜಿಲ್ಲೆ

ಬಸ್ ಸೌಕರ್ಯವಿಲ್ಲದೆ ವಿದ್ಯಾರ್ಥಿಗಳ ಪರದಾಟ

ಶಶಿಧರ ಎಲ್

ಕವಿತಾಳ: ಸುತ್ತಮುತ್ತಲಿನ ವಿವಿಧ ಗ್ರಾಮಗಳ ವಿದ್ಯಾರ್ಥಿಗಳು ಪಟ್ಟಣದಿಂದ ಊರಿಗೆ ತೆರಳಲು ಬಸ್ ಸೌಕರ್ಯವಿಲ್ಲದೆ ಸೋಮವಾರ ಪರದಾಡಿದರು. ಸಂಜೆ 7 ಗಂಟೆವರೆಗೆ ಬಸ್‌ಗಾಗಿ ಕಾದು ಕುಳಿತಿದ್ದರು.

ಹುಸೇನಪುರ, ಸೈದಾಪುರ, ತೊಪ್ಪಲದೊಡ್ಡಿ, ಕಡ್ಡೋಣಿ ಗ್ರಾಮಗಳ ವಿದ್ಯಾರ್ಥಿಗಳು ಪ್ರೌಢಶಾಲೆ ಹಾಗೂ ಕಾಲೇಜಿಗಾಗಿ ಕವಿತಾಳಕ್ಕೆ ಬರುತ್ತಾರೆ. ಸೋಮವಾರ ಬಸ್ ವಿಳಂಬವಾದ ಬಗ್ಗೆ ಪ್ರತಿಕ್ರಿಯಿಸಿದ ವಿದ್ಯಾರ್ಥಿಗಳು, ಬಸ್ ಸರಿಯಾಗಿ ಬರುವುದಿಲ್ಲವಾದ್ದರಿಂದ ಪಾಲಕರು ಶಾಲೆಗೆ ಹೋಗುವುದು ಬೇಡ ಎನ್ನುತ್ತಿದ್ದಾರೆ.

ಸಮಯಕ್ಕೆ ಸರಿಯಾಗಿ ಬಸ್ ಬಂದರೆ ಸಮಸ್ಯೆಯಿರುವುದಿಲ್ಲ. ವಾರದಲ್ಲಿ ಎರಡ್ಮೂರು ದಿನ ಬಸ್ ಬಾರದೆ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು ಎಂದರು.

ಮಾನ್ವಿ ಬಸ್ ಡಿಪೋ ಮ್ಯಾನೇಜರ್‌ಗೆ ಕರೆ ಮಾಡಿದಾಗ, ಅವರು ಕವಿತಾಳದ ಬಸ್ ನಿಲ್ದಾಣದ ಕಂಟ್ರೋಲರ್ ಹನುಮಂತಪ್ಪ ನಾಯಕ ಕೊಟೆಕಲ್‌ಗೆ ಬಸ್ ವ್ಯವಸ್ಥೆ ಮಾಡಲು ತಿಳಿಸಿದರು. ಕಂಟ್ರೋಲರ್ ಹನುಮಂತಪ್ಪ ನಾಯಕ ಕೊಟೆಕಲ್ ಮಸ್ಕಿ ಡಿಪೋ ಬಸ್ ತರಿಸಿಕೊಂಡು ವಿದ್ಯಾರ್ಥಿಗಳನ್ನು ಊರಿಗೆ ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡುವಷ್ಟರಲ್ಲಿ ಪಾಲಕರು ಖಾಸಗಿ ವಾಹನ ಬಾಡಿಗೆ ಮಾಡಿಕೊಂಡು ಬಂದು ಮಕ್ಕಳನ್ನು ಕರೆದುಕೊಂಡು ಹೋದರು.

ಮುಂದಿನ ದಿನಗಳಲ್ಲಿ ಸಮಸ್ಯೆಯಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಗ್ರಾಮಸ್ಥರಾದ ಲಿಂಗಯ್ಯನಾಯಕ ಸೈದಾಪುರ, ರಮೇಶ ತೊಪ್ಪಲದೊಡ್ಡಿ, ರಾಮಯ್ಯ ಹುಸೇನಪೂರ, ಹುಲುಗಪ್ಪ ಕೆ.ತಿಮ್ಮಾಪುರ ಒತ್ತಾಯಿಸಿದರು.

ಊರಿಗೆ ಬಸ್ ಬರದಿದ್ದಾಗ ನಮ್ಮ ಮಕ್ಕಳು ಶಾಲೆಗೆ 10 ಕಿಮೀ ನಡೆದುಕೊಂಡು ಹೋಗುತ್ತಾರೆ. ಬಸ್ ಬರದಿದ್ದರೆ ಕೆಲ ವಿದ್ಯಾರ್ಥಿಗಳು ಶಾಲೆಗೆ ತೆರಳುವುದಿಲ್ಲ. ಸೋಮವಾರ ಬಸ್ ಬಾರದಿರುವುದರಿಂದ ಸೈದಾಪುರ ಹಾಗೂ ಹುಸೇನಪುರ ಗ್ರಾಮದ ವಿದ್ಯಾರ್ಥಿಗಳು ನಡೆದುಕೊಂಡು ಹೋಗಿದ್ದಾರೆ. | ನಿಂಗಪ್ಪ ನಾಯಕ, ಗ್ರಾಮಸ್ಥ, ಸೈದಾಪುರ ಬಸ್ ವ್ಯವಸ್ಥೆ ಮಾಡುವಂತೆ ವಿದ್ಯಾರ್ಥಿಗಳು ಸೋಮವಾರ ಸಂಜೆ 6 ಗಂಟೆಗೆ ಬಂದು ಮನವಿ ಮಾಡಿದರು. ನಾನು ಮಸ್ಕಿ ಡಿಪೋ ಬಸ್ ತರಿಸುವಷ್ಟರಲ್ಲಿ ಪಾಲಕರು ಮಕ್ಕಳನ್ನು ಕರೆದುಕೊಂಡು ಹೋಗಿದ್ದರು. ಇನ್ನು ಮುಂದೆ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ಅಗತ್ಯ ಕ್ರಮಕ್ಕಾಗಿ ಮೇಲಧಿಕಾರಿಗಳನ್ನು ಕೋರಲಾಗುವುದು.| ಹನುಮಂತಪ್ಪ ನಾಯಕ ಕೊಟೆಕಲ್, ಕಂಟ್ರೋಲರ್, ಕವಿತಾಳ