ಪಾಮನಕಲ್ಲೂರಿನಲ್ಲಿ ನಿರ್ಮಿಸಿರುವ ಕಸ್ತೂರಬಾ ಗಾಂಧಿ ಬಾಲಿಕಾ ವಸತಿನಿಲಯ ಕಟ್ಟಡದ ಹೊರನೋಟ. 
ಜಿಲ್ಲೆ

ಸ್ವಂತ ಕಟ್ಟಡವಿದ್ದರೂ ಸ್ಥಳಾಂತರವಾಗದ ವಸತಿ ನಿಲಯ

ಮಾನ್ವಿಯ ಬಾಡಿಗೆ ಬಿಲ್ಡಿಂಗ್‌ನಲ್ಲಿ ಕಾರ್ಯನಿರ್ವಹಣೆ ಪಾಮನಕಲ್ಲೂರಿನಲ್ಲಿ ಸಮಸ್ಯೆ

ಕವಿತಾಳ: ಸಮೀಪದ ಪಾಮನಕಲ್ಲೂರಿನಲ್ಲಿ ನಿರ್ಮಿಸಿರುವ ಕಸ್ತೂರಬಾ ಗಾಂಧಿ ಬಾಲಿಕಾ ವಸತಿನಿಲಯ ಕಟ್ಟಡ ಉದ್ಘಾಟನೆಯಾಗಿ ಆರು ತಿಂಗಳಾಗಿದ್ದರೂ ಇನ್ನೂ ವಿದ್ಯಾರ್ಥಿಗಳ ಸ್ಥಳಾಂತರವಾಗಿಲ್ಲ.

ಸದ್ಯ ಈ ವಸತಿನಿಲಯ ಮಾನ್ವಿಯಲ್ಲಿ ಖಾಸಗಿ ಕಟ್ಟಡದಲ್ಲಿದೆ. ಪಾಮನಕಲ್ಲೂರಿನಲ್ಲಿ 83 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಆದರೂ, ವಿದ್ಯಾರ್ಥಿಗಳನ್ನು ಮಾನ್ವಿಯ ಬಾಡಿಗೆ ಕಟ್ಟಡದಿಂದ ಪಾಮನಕಲ್ಲೂರಿನ ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಮಾಡದಿರುವುದು ಅನುಮಾನಕ್ಕೆ ಕಾರಣವಾಗಿದೆ.

ಕಟ್ಟಡ ನಿರ್ಮಾಣ ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿತ್ತು. ಆಗ ನಿರ್ಮಿತಿ ಕೇಂದ್ರದ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆದ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದಿತ್ತು. ಈ ಕಾರಣಕ್ಕೆ 15 ವರ್ಷಗಳ ಹಿಂದೆ ಮಾನ್ವಿಯಲ್ಲಿ ವಸತಿ ನಿಲಯ ಆರಂಭಿಸಲಾಗಿತ್ತು. ಆದಷ್ಟು ಬೇಗ ಪಾಮನಕಲ್ಲೂರಿನ ಸ್ವಂತ ಕಟ್ಟಡಕ್ಕೆ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಬೇಕೆಂದು ಗ್ರಾಮದ ವಿಜಯಕುಮಾರ ಗುತ್ತೇದಾರ, ರಮೇಶ, ಲಕ್ಷಣ ಚೌಡ್ಲಿ, ಗ್ರಾಪಂ ಸದಸ್ಯರಾದ ದುರುಗಪ್ಪ, ವೀರಭದ್ರಪ್ಪ, ಅಮರೇಶ ಒತ್ತಾಯಿಸಿದ್ದಾರೆ.

ಸರ್ಕಾರದ ಹಣ ಪೋಲು

ಪಾಮನಕಲ್ಲೂರಿಗೆ 15 ವರ್ಷದ ಹಿಂದೆ ಕಸ್ತೂರಬಾ ಗಾಂಧಿ ಬಾಲಿಕಾ ವಸತಿನಿಲಯ ಮಂಜೂರಾಗಿತ್ತು. ಗ್ರಾಮದಲ್ಲಿ ಕಟ್ಟಡ ಇಲ್ಲ ಎನ್ನುವ ಕಾರಣಕ್ಕೆ ಮಾನ್ವಿಯ ಖಾಸಗಿ ಕಟ್ಟಡದಲ್ಲಿ ಆರಂಭಿಸಲಾಗಿತ್ತು. ಇಲ್ಲಿ 6ರಿಂದ 10ನೇ ತರಗತಿವರೆಗೆ 80 ಮಕ್ಕಳು ಪ್ರವೇಶ ಪಡೆದಿದ್ದಾರೆ. ಪಾಮನಕಲ್ಲೂರಿನಲ್ಲಿ ನಿರ್ಮಿಸಿದ ಕಟ್ಟಡ ಆರು ತಿಂಗಳ ಹಿಂದೆ ಉದ್ಘಾಟಿಸಲಾಗಿದೆ. ಸ್ವಂತ ಕಟ್ಟಡವಿದ್ದರೂ ಮಾನ್ವಿಯಲ್ಲಿ ಬಾಡಿಗೆ ಕಟ್ಟುತ್ತಿರುವುದು ಸರ್ಕಾರದ ಹಣ ಪೋಲುಮಾಡಲಾಗುತ್ತಿದೆ.

ಪಾಮನಕಲ್ಲೂರು ಹೋಬಳಿ ಕೇಂದ್ರವಾಗಿದ್ದು, ಸರ್ಕಾರಿ ಪ್ರೌಢಶಾಲೆ, ಆಸ್ಪತ್ರೆ, ಕಂದಾಯ ಮತ್ತು ರೈತ ಸಂಪರ್ಕ ಕೆಂದ್ರಗಳು ಇವೆ. ಪಾಮನಕಲ್ಲೂರಿನಲ್ಲಿರಬೇಕಾದ ವಸತಿ ನಿಲಯವನ್ನು ಮಾನ್ವಿಯಲ್ಲಿ ಮುಂದುವರೆಸಿರುವುದು ಸರಿಯಕಲ್ಲ. ಕಾಂಪೌಂಡ್ ನಿರ್ಮಾಣ ಸೇರಿ ಯಾವುದೇ ನೆಪ ಹೇಳದೆ ಬೇಗ ಪಾಮನಕಲ್ಲೂರಿನಲ್ಲಿ ಕಸ್ತೂರಬಾ ಗಾಂಧಿ ಬಾಲಿಕಾ ವಸತಿ ನಿಲಯ ಕಾರ್ಯಾರಂಭಿಸಬೇಕು.| ದುರುಗಪ್ಪ ಕಲ್ಲೂರು ಗ್ರಾಪಂ ಸದಸ್ಯ ಪಾಮನಕಲ್ಲೂರು
ಪಾಮನಕಲ್ಲೂರು ಕಸ್ತೂರಬಾ ಗಾಂಧಿ ಬಾಲಿಕಾ ವಸತಿನಿಲಯದಲ್ಲಿ ಕುಡಿಯುವ ನೀರು, ವಿದ್ಯುತ್ ಸಂಪರ್ಕ ಮತ್ತು ಕಾಂಪೌಂಡ್ ನಿರ್ಮಾಣ ಮಾಡಬೇಕಾಗಿದೆ. ಮಸ್ಕಿ ಇಒ ಜತೆಗೆ ಭೇಟಿ ನೀಡಿ ಕಟ್ಟಡ ಪರಿಶೀಲಿಸಿ ಜನಪ್ರತಿನಿಧಿಗಳು, ಉನ್ನತಧಿಕಾರಿಗಳಿಗೆ ಮಾಹಿತಿ ನೀಡಿ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು.| ಚಂದ್ರಶೇಖರ ದೊಡ್ಡಮನಿ ಬಿಇಒ ಮಾನ್ವಿ