ಕವಿತಾಳ: ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನಕ್ಕೆ ತಕ್ಕಂತೆ ಪಾಠ ಮಾಡಲು ಶಿಕ್ಷಕರು ಕೌಶಲ ಹೊಂದುವುದು ಅಗತ್ಯ ಎಂದು ಸಂಪನ್ಮೂಲ ವ್ಯಕ್ತಿ ಸೌಮ್ಯಶ್ರೀ ಹೇಳಿದರು.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಿಕ್ಷಕರಿಗೆ ಗಣಿತ ಗಣಕ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಲಾ ಅವಧಿ ಮುಗಿದ ನಂತರ ಶಿಕ್ಷಕರು ಮಕ್ಕಳ ಪಾಲಕರಿಗೆ ಮೊಬೈಲ್ ಕರೆಮಾಡಿ ಗಣಿತ ವಿಷಯ ಕುರಿತು ಮಕ್ಕಳ ಜೊತೆ ಚರ್ಚಿಸಿ, ಕಲಿಕಾ ಸಂದೇಹಗಳನ್ನು ದೂರ ಮಾಡಬೇಕು. ಕೃತಕ ಬುದ್ಧಿಮತೆ ರೋಬೋಟಿಕ್ ತಂತ್ರಜ್ಞಾನ ಮತ್ತು ಸ್ವಯಂಚಾಲಿತ ತಂತ್ರಜ್ಞಾನಗಳು ಎಲ್ಲ ವ್ಯಕ್ತಿಗಳ ಸ್ವರೂಪ ಬದಲಿಸುತ್ತಿವೆ. ನಿತ್ಯದ ಕೆಲಸಗಳನ್ನು ಸ್ವಯಂಚಾಲಿತ ಆಗುತ್ತಿರುವುದರಿಂದ ಸೃಜನಶೀಲತೆ ವಿಮರ್ಶಾತ್ಮಕ ಚಿಂತನೆ ಸಂವಹನ ಕೌಶಲ ಪಡೆದು ಮಕ್ಕಳ ಭವಿಷ್ಯ ರೂಪಿಸಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಮಹೇಶ ಮಾತನಾಡಿ, ರಾಜ್ಯದ 17 ಜಿಲ್ಲೆಗಳಲ್ಲಿ 93 ಮಹತ್ವಾಕಾಂಕ್ಷಿ ಬ್ಲಾಕ್‌ಗಳಲ್ಲಿ 14 ಸಾವಿರ ಶಾಲೆಗಳ 35 ಸಾವಿರ ಶಿಕ್ಷಕರಿಗೆ ಗಣಿತ ಗಣಕ ತರಬೇತಿಯನ್ನು ನೀಡಲಾಗುತ್ತಿದೆ ಎಂದರು. ಕವಿತಾಳ, ಪಾಮನಕಲ್ಲೂರು, ಹಾಲಪೂರ, ಬಾಗಲವಾಡ ತೋರಣದಿನ್ನಿ ಸರ್ಕಾರಿ ಶಾಲೆಗಳ ಶಿಕ್ಷಕರು ಇದ್ದರು.