ಹಾಲಪುರ ಸಮೀಪದ ಯದ್ದಲದಿನ್ನಿ ಕ್ಯಾಂಪಿನ ಹತ್ತಿರ ತುಂಗಭದ್ರಾ ಎಡದಂಡೆ 65ರ ಉಪನಾಲೆಯ ಸೇತುವೆಗೆ ಬೊಂಗಾ ಬಿದ್ದಿರುವುದು. 
ಜಿಲ್ಲೆ

ಬೊಂಗಾ ದುರಸ್ತಿಗೆ ಒತ್ತಾಯ

ಶ್ರೀನಾಥ

ಕವಿತಾಳ: ಸಮೀಪದ ಹಾಲಪುರದ ಉಪನಾಲೆ-65ರ ಯದ್ದಲದಿನ್ನಿ ಕ್ಯಾಂಪ್ ಹತ್ತಿರ ಬೊಂಗಾಗಳು ಬಿದ್ದಿದ್ದು, ಇದೇ ರಸ್ತೆಯಲ್ಲಿ ವಾಹನಗಳಲ್ಲಿ ಶಾಲೆಗೆ ತೆರಳುವ ವಿದ್ಯಾರ್ಥಿಗಳು ಭಯದಲ್ಲೇ ಜೀವ ಕೈಯಲ್ಲಿಡಿದು ಸಂಚರಿಸುವಂತಾಗಿದೆ.

ಇಲ್ಲಿ ಬೊಂಗಾಗಳು ಬಿದ್ದು ಐದು ವರ್ಷಗಳೇ ಕಳೆದಿವೆ. ಈ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದಾಗ ತಾತ್ಕಲಿಕವಾಗಿ ದುರಸ್ತಿ ಮಾಡಿಸುತ್ತಾರೆ. ಕೆಲವು ದಿನಗಳ ನಂತರ ಮತ್ತೆ ಅದೇ ಸಮಸ್ಯೆ ಸೃಷ್ಟಿಯಾಗುತ್ತದೆ.

ಕಳೆದ ತಿಂಗಳು ಇದೇ ಮಾರ್ಗದಲ್ಲಿ ಹೋಗುತ್ತಿರುವಾಗ ಟ್ರ್ಯಾಕ್ಟರ್ ಪಲ್ಟಿಯಾಗಿ ಜೀವ ಹಾನಿಯಾಗಿತ್ತು. ಇಲ್ಲಿಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಬಂದು ದುರಸ್ತಿ ಮಾಡಲಾಗುವುದು ಎಂದು ಭರವಸೆ ಕೊಟ್ಟು ಹೋದರೆ ಹೊರತು ಶಾಶ್ವತ ಪರಿಹಾರ ಕಂಡುಕೊಳ್ಳಲಿಲ್ಲ.

ಬುಧವಾರವಷ್ಟೇ ಹಾಲಪುರದ ಖಾಸಗಿ ಶಾಲೆಯ ವಾಹನವೊಂದು ಮಕ್ಕಳನ್ನು ತುಂಬಿಕೊಂಡು ಹೋಗುತ್ತಿರುವಾಗ ಬೊಂಗಾದಲ್ಲಿ ಸಿಲುಕಿದ ಪರಿಣಾಮ ಜೀವವನ್ನು ಉಳಿಸಿಕೊಳ್ಳಲು ಪರದಾಡುವಂತಾಗಿತ್ತು.

ಶಾಲಾ ಮಕ್ಕಳ ವಾಹನ ನಾಲೆಗೆ: ಹಾಲಪುರದಲ್ಲಿ ಐದಕ್ಕೂ ಹೆಚ್ಚು ಶಾಲೆಗಳಿದ್ದು, ಬಳಗಾನೂರು ಕ್ಯಾಂಪ್, ಯದ್ದಲದಿನ್ನಿ ಕ್ಯಾಂಪ್, ನಾರಾಯಣನಗರ ಕ್ಯಾಂಪ್, ಬಸವಣ್ಣ ಕ್ಯಾಂಪ್‌ನ ವಿದ್ಯಾರ್ಥಿಗಳು ಪ್ರತಿದಿನ ಇದೇ ಮಾರ್ಗವಾಗಿ ಇಲ್ಲಿಗೆ ಶಿಕ್ಷಣಕ್ಕಾಗಿ ಬರುತ್ತಾರೆ. ಬೊಂಗಾ ಬಿದ್ದ ಸ್ಥಳ ಬಂದಾಗ ಮೈಮರೆತು ವಾಹನ ಚಾಲನೆ ಮಾಡಿದರೆ ಜೀವಕ್ಕೆ ಅಪಾಯವಿದೆ. ಕಳೆದ ಮೂರು ವರ್ಷದ ಹಿಂದೆ ಶಾಲಾ ಮಕ್ಕಳ ವಾಹನವು ನಾಲೆಗೆ ಉರುಳಿತ್ತು.

ಕೋಟ್: ನಾಲೆಗೆ ಬೊಂಗಾ ಬಿದ್ದ ಬಗ್ಗೆ ಮಾಹಿತಿಯಲ್ಲ. ಮಾಹಿತಿ ಪಡೆದು ಕ್ರಮ ಕೈಗೊಳ್ಳಲು ಮೇಲಧಿಕಾರಿಗಳಿಗೆ ಮನವಿ ಮಾಡಲಾಗುವುದು.

> ವಿಜಯಲಕ್ಷ್ಮೀ, ಎಇಇ, ನೀರಾವರಿ ಇಲಾಖೆ ಸಿರವಾರ 

ಕೋಟ್: ಇದೇ ಮಾರ್ಗವಾಗಿ ಶಾಲಾ ವಾಹನ, ನೆಲ್ಲು ತುಂಬಿದ ಲಾರಿಗಳು ಮತ್ತು ಟ್ರಾೃಕ್ಟರ್‌ಗಳು ಚಲಿಸುತ್ತಿವೆ. ಇದು ಮಾಹಿತಿಯಿದ್ದರು ಕೂಡ ಅಧಿಕಾರಿಗಳು ನಮಗೆ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ.

> ರಾಮಬಾಬು, ಯದ್ದಲದಿನ್ನಿ ಕ್ಯಾಂಪ್ ನಿವಾಸಿ