ಕವಿತಾಳ ರೈತ ಸಂಪರ್ಕಕೇಂದ್ರ ಕಟ್ಟಡದಲ್ಲಿ ಗದ್ದಲ ಗಲಾಟೆ ಇಲ್ಲದೆ ರೈತರು ಬಿತ್ತನೆಬೀಜ ಕೊಳ್ಳುತ್ತಿರುವುದು. 
ಜಿಲ್ಲೆ

ವರುಣನ ವಿರಾಮಕ್ಕೆ ಕಾಯುತ್ತಿರುವ ರೈತರು

ಶ್ರೀನಾಥ

ಕವಿತಾಳ: ಹೋಬಳಿಯಲ್ಲಿ ಉತ್ತಮ ಮಳೆಯಾಗಿ ಹರ್ಷಗೊಂಡ ರೈತರು, ಬಿತ್ತನೆ ಮಾಡುವ ಸಲುವಾಗಿ ಮಳೆಯ ವಿರಾಮಕ್ಕೆ ಕಾಯುತ್ತಿದ್ದಾರೆ.

ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರಿಂದ ರೈತರು ಬಿತ್ತನೆಗೆ ಸಿದ್ಧತೆ ನಡೆಸಿದ್ದು, ರೈತ ಸಂಪರ್ಕ ಕೇಂದ್ರದಿಂದ ಬಿತ್ತನೆ ಬೀಜಗಳನ್ನು ಖರೀದಿಸಲು ಮುಂದಾಗಿದ್ದಾರೆ.

ಸದ್ಯ ಕೇಂದ್ರದಲ್ಲಿ ತೊಗರಿ ಮತ್ತು ಹೆಸರು ಮಾತ್ರ ಮಾರಾಟವಾಗುತ್ತಿದ್ದು, ಸೂರ್ಯಕಾಂತಿ, ನವಣೆ, ಸಜ್ಜೆಯನ್ನು ತರಿಸಿಲ್ಲ. ಈ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಕೇಳಿದರೆ, ಈ ಬೀಜಗಳ ಬಿತ್ತನೆಗಿನ್ನೂ ತಡವಿದ್ದು, ಆ ವೇಳೆಗೆ ತರಿಸಲಾಗುವುದು ಎನ್ನುತ್ತಾರೆ.

ಜಿಲ್ಲೆಯಲ್ಲಿಯೇ ಕವಿತಾಳ ಒಣ ಬೇಸಾಯ ಹೊಂದಿದ ದೊಡ್ಡ ಹೋಬಳಿಯಾಗಿದ್ದು, ಕೃಷಿ ಅಧಿಕಾರಿಗಳು ರೈತರಿಗೆ ಸಮಸ್ಯೆಯಾಗದಂತೆ ಸಕಾಲಕ್ಕೆ ಬಿತ್ತನೆ ಬೀಜ ಒದಗಿಸಬೇಕು ಎನ್ನುವುದು ರೈತರ ಒತ್ತಾಯವಾಗಿದೆ.

ಕವಿತಾಳ ಹೋಬಳಿ ವ್ಯಾಪ್ತಿಯು 1,500 ಹೆಕ್ಟೇರ್ ವ್ಯಾಪ್ತಿಯಿದ್ದು, 700 ಹೆಕ್ಟೇರ್‌ನಲ್ಲಿ ಮುಂಗಾರು ಹಂಗಾಮಿಗೆ ಬಿತ್ತನೆ ಮಾಡುವ ಗುರಿ ಇದೆ. ಕವಿತಾಳ, ಹಿರೇಹಣಗಿ, ಚಿಕ್ಕಹಣಗಿ, ಜಿನ್ನಾಪುರ, ಪಾತಪುರ, ಚಿಕ್ಕಬಾರದಿನ್ನಿ, ಗೊಲದಿನ್ನಿ, ದೇವತಗಲ್, ಉಮಳಿಗುಡದಿನ್ನಿ, ಸೈದಪುರ, ಹುಸೇನಪುರ, ತಿಮ್ಮಾಪುರ, ಚಿಂಚರಕಿ, ಬುದ್ದಿನ್ನಿ, ಹೀರಾ, ಹುಡಾ, ಕಸಮದೊಡ್ಡಿ, ತೊಪ್ಪಲದೊಡ್ಡಿ ಸೇರಿದಂತೆ 20 ಗ್ರಾಮಗಳಲ್ಲಿ ರೈತರು ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಬಾಕ್ಸ್

ಕವಿತಾಳ ಕೃಷಿ ಸಂಪರ್ಕ ಕೇಂದ್ರದಿಂದ ಇಲ್ಲಿವರೆಗೆ 60 ಕೆಜಿ ಹೆಸರು ಮತ್ತು 60 ಕ್ವಿಂಟಾಲ್ ತೊಗರಿ ಮಾರಾಟವಾಗಿದ್ದು, ಇನ್ನು 300 ಕ್ವಿಂಟಾಲ್ ತೊಗರಿ ಬೀಜದ ಅವಶ್ಯಕತೆಯಿದೆ. ಒಂದು ಕ್ವಿಂಟಾಲ್ ಹೆಸರು, 50 ಕ್ವಿಂಟಾಲ್ ಗಂಗಾಕಾವೇರಿ ಸೂರ್ಯಕಾಂತಿ ಹಾಗೂ 50 ಕ್ವಿಂಟಾಲ್ ಸಜ್ಜೆ ಸೇರಿದಂತೆ ಇತರೆ ಬಿತ್ತನೆ ಬೀಜಗಳ ಬೇಡಿಕೆ ಸೃಷ್ಟಿಯಾಗಿದೆ.

ಕೋಟ್: ನಮ್ಮದು ಮಸಾರಿ ಜಮೀನು. ಅವಧಿ ಪೂರ್ವ ಮುಂಗಾರು ಉತ್ತಮವಾಗಿರುವುದರಿಂದ ತೊಗರಿ ಬಿತ್ತನೆ ಮಾಡಲಿದ್ದೇವೆ. ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಿದ್ದು, ಬಿತ್ತನೆ ಮಾಡಲು ಮಳೆರಾಯ ಕೊಂಚ ವಿರಾಮ ನೀಡುವುದನ್ನೇ ಕಾಯುತ್ತಿದ್ದೇವೆ.

ಯಂಕಪ್ಪ ತಿಗಳಿಗೌಡರ, ರೈತ, ಹುಸೇನಪುರ

ಕೋಟ್: ನಮ್ಮ ಹೋಬಳಿ ಕೇಂದ್ರದಲ್ಲಿ ಈ ಸಲ 700 ಹೆಕ್ಟೇರ್‌ಗೆ ಬೇಕಾಗುವಷ್ಟು ಬೀಜವನ್ನು ತರಿಸಿದ್ದೇವೆ. ಯಾವುದೇ ಸಮಸ್ಯೆಯಾಗದಂತೆ ರೈತರಿಗೆ ಬೀಜವನ್ನು ವಿತರಿಸುತ್ತೇವೆ. ಸೂರ್ಯಕಾಂತಿ ಮತ್ತು ಸಜ್ಜೆಯ ಬಿತ್ತನೆ ಬೀಜವನ್ನು ತರಿಸಲಾಗುವುದು. ಮಧ್ಯವರ್ತಿಗಳ ಮಾತುಗಳನ್ನು ಕೇಳದೆ ರೈತರು ನೇರವಾಗಿ ರೈತ ಸಂಪರ್ಕ ಕೇಂದ್ರಕ್ಕೆ ಬಂದು ಬಿತ್ತನೇ ಬೀಜವನ್ನು ಖರೀದಿಸಬೇಕು.

ಗುರುನಾಥ , ಸಹಾಯಕ ಕೃಷಿ ನಿರ್ದೇಶಕ ಮಾನ್ವಿ