ಮಂಡ್ಯ: ರಾಜ್ಯದಲ್ಲಿ ನಡೆಯುತ್ತಿರುವ ಅಶಾಂತಿಯ ಘಟನೆಗಳು ನಿಲ್ಲಬೇಕು. ಸಾಹಿತ್ಯದ ಮೂಲಕ ಇವರಿಗೆ ಅರಿವು ಮೂಡಿಸುವ ಕೆಲಸವಾಗಬೇಕು ಎಂದು ಕೃಷಿಕ ಲಯನ್ಸ್ ಸಂಸ್ಥೆಯ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಸಲಹೆ ನೀಡಿದರು.
ನಗರದ ಸೇವಾಕಿರಣ ಸಭಾಂಗಣದಲ್ಲಿ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಹಾಗೂ ಡಿಜೆಸಿಎಂಎಸ್ ಶೋಷಿಯಲ್ ಸರ್ವೀಸ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ‘ಕವಿಯೊಂದಿಗೆ ಕವಿತೆ ಕೇಳಿ’ ಹಾಗೂ ಶ್ರಾವಣ, ಸಂಗೀತ, ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವ ಸಮೂಹವನ್ನು ಸಾಹಿತ್ಯದೆಡೆಗೆ ಕರೆದುಕೊಂಡು ಹೋಗಲು ಚಿಂತನೆ ಮಾಡಬೇಕಿದೆ. ಆ ಮೂಲಕ ಸಾಹಿತ್ಯ ಅಭಿರುಚಿ ಬೆಳೆಸಬೇಕು. ಇತ್ತೀಚೆಗೆ ಸಣ್ಣಪುಟ್ಟ ವಿಷಯಗಳಿಗೂ ಅಶಾಂತಿ ವಾತಾವರಣ ಉಂಟು ಮಾಡುತ್ತಿರುವುದನ್ನು ನೋಡುತ್ತಿದ್ದೇವೆ, ಇದು ನಾಗರಿಕ ಸಮಾಜವೇ ತಲೆತಗ್ಗಿಸುವ ಕೆಲಸವಾಗಿದೆ ಎಂದು ವಿಷಾದಿಸಿದರು.
ರಾಜ್ಯದಲ್ಲಿ ಅಶಾಂತಿ ವಾತಾವರಣ ಉಂಟು ಮಾಡಲಾಗುತ್ತಿದೆ. ಅಮಾಯಕ ನಾಗರಿಕರನ್ನು ಬಲಿಪಶು ಮಾಡಲಾಗುತ್ತಿದೆ. ಇವರಿಗೆ ಸಾಹಿತ್ಯದ ಅರಿವಾಗಬೇಕು. ಪ್ರತಿಯೊಬ್ಬರೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಾಗೂ ಸಮಾಜದಲ್ಲಿ ಶಾಂತಿಯ ಬಾಳ್ವೆ ನಡೆಸಲು ಮುಂದಾಗಬೇಕು. ಅದಕ್ಕೆ ಎಲ್ಲ ಸಂಘ ಸಂಸ್ಥೆಗಳು ಸಹಕರಿಸಬೇಕು ಎಂದು ಮನವಿ ಮಾಡಿದರು.