ಜಿಲ್ಲೆ

ವಿದೇಶದಲ್ಲಿ ಕನ್ನಡ ಸಮ್ಮೇಳನ ಮಾಡಿದರೆ ಸಾಲದು, ಮಕ್ಕಳಿಗೆ ಕನ್ನಡ ಕಲಿಸಿ

ಸದೇಶ್ ಕಾರ್ಮಾಡ್

ಮೈಸೂರು: ವಿದೇಶದಲ್ಲಿ ಸಮ್ಮೇಳನ ಮಾಡುವವರು ಮಕ್ಕಳಿಗೆ ಕನ್ನಡವನ್ನೇ ಕಲಿಸುತ್ತಿಲ್ಲ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ವಿಷಾದಿಸಿದರು.

ಉತ್ತಿಷ್ಠ ಭಾರತ ಪ್ರತಿಷ್ಠಾನ, ಗ್ರೀನ್ ಗ್ರಾಮೀಣಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆಯ ವತಿಯಿಂದ ನಿಮಿಷಾಂಬ ನಗರ ಹಿರಿಯರ ಹಗಲು ಯೋಗ ಕ್ಷೇಮ ಕೇಂದ್ರದಲ್ಲಿ ಗುರುವಾರ ಸ್ವಾತಂತ್ರೃ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿದೇಶಗಳಲ್ಲಿ ಕನ್ನಡ ಸಮ್ಮೇಳನಗಳನ್ನು ಸ್ವಾರ್ಥಕ್ಕೆ ಮಾಡಬಾರದು, ಮೊದಲು ಅವರವರ ಮನೆಯ ಮಕ್ಕಳಿಗೆ ಕನ್ನಡ ಕಲಿಸಬೇಕು. ಆಗ ಸಮ್ಮೇಳನ ಮಾಡುವುದು ಸಾರ್ಥಕವಾಗುತ್ತದೆ. ಇಂಗ್ಲಿಷ್‌ಅನ್ನು ಮಾಧ್ಯಮವನ್ನಾಗಿ ಕಲಿಸುವ ಬದಲು ಒಂದು ಭಾಷೆಯಾಗಿ ಕಲಿಸಬೇಕು, ಪ್ರತಿಯೊಬ್ಬರಿಗೂ ಇಂಗ್ಲಿಷ್ ಭಾಷೆಯ ಅಗತ್ಯವಿದೆ ಎಂದರು.

ಕವಯತ್ರಿ ಎ. ಪುಷ್ಪಾ ಅಯ್ಯಂಗಾರ್, ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಕವಯತ್ರಿ ಡಾ.ಕೆ. ಲೀಲಾಪ್ರಕಾಶ್ ಮಾತನಾಡಿದರು. ಈ ಸಂದರ್ಭ ಸಮಾಜ ಸೇವಕ ಎನ್. ಶ್ರೀಧರ್ ದೀಕ್ಷಿತ್ ಅವರನ್ನು ಸನ್ಮಾನಿಸಲಾಯಿತು. ಉತ್ತಿಷ್ಠ ಭಾರತ ಪ್ರತಿಷ್ಠಾನ ಸಂಚಾಲಕ ಎಂ.ವಿ. ನಾಗೇಂದ್ರ ಬಾಬು, ಕಾರ್ಯಕಾರಿ ಸಮಿತಿ ಸದಸ್ಯ ಎನ್. ಅನಂತ, ಹಿರಿಯರ ಹಗಲು ಯೋಗ ಕ್ಷೇಮ ಕೇಂದ್ರದ ಸಂಸ್ಥಾಪಕ ಎಂ.ಪಿ. ಪ್ರಭುಸ್ವಾಮಿ ಹಾಗೂ ಇತರರು ಇದ್ದರು.