ಮಡಿಕೇರಿ:
ಹೊರಗಡೆ ಸುರಿಯುತ್ತಿದ್ದ ಧಾರಾಕಾರ ಮಳೆ, ಮಂಜು ಮುಸುಕಿದ ವಾತಾವರಣ, ಚುಮುಚುಮು ಚಳಿ...ರಾಜಾಸೀಟ್‌ನ ಉದ್ಯಾನದಿಂದ ಬೀಸಿ ಬರುತ್ತಿದ್ದ ಹೂವುಗಳ ಪರಿಮಳ...ಇತ್ತ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಕವಿಮನಸ್ಸುಗಳ ಸಂಗಮ...ಇದು ಗುರುವಾರ ಇಲ್ಲಿನ ಗಾಂಧಿ ಮೈದಾನದಲ್ಲಿ ಮಡಿಕೇರಿ ನಗರ ದಸರಾ ಸಮಿತಿ ಆಶ್ರಯದಲ್ಲಿ ದಸರಾ ಕವಿಗೋಷ್ಠಿ ಸಮಿತಿ ವತಿಯಿಂದ ಆಯೋಜಿಸಿದ್ದ ಬಹುಭಾಷಾ ಕವಿಗೋಷ್ಠಿ ವೇಳೆ ಕಂಡು ಬಂದ ದೃಶ್ಯ.
ಮಡಿಕೇರಿ ದಸರಾ ಕವಿಗೋಷ್ಠಿ ಎಂದರೆ ಇದೊಂದು ರೀತಿಯಲ್ಲಿ ವೈವಿಧ್ಯತೆಯ ಕವನಗಳ ರಸದೌತಣ. ಹಲವು ಭಾಷೆಗಳ ನೆಲೆಬೀಡಾಗಿರುವ ಕೊಡಗಿನಲ್ಲಿ ಚಾಲ್ತಿಯಲ್ಲಿ ಇರುವ ಎಲ್ಲಾ ಭಾಷೆಗಳ ಕವನಗಳಿಗೂ ಅವಕಾಶ ಕೊಡುವುದು ಇಲ್ಲಿಯ ವಿಶೇಷ. ಬಹಳ ಅಪರೂಪದ ಎರವ, ಕುಂಬಾರ ಭಾಷೆಗಳ ಕವನಗಳ ಆಸ್ವಾದನೆಗೂ ಮಡಿಕೇರಿ ದಸರಾ ಕವಿಗೋಷ್ಠಿ ವೇದಿಕೆ ನೀಡುತ್ತಾ ಬಂದಿದೆ. ಕೆಲವೊಂದು ಭಾಷೆಗಳು ಅರ್ಥ ಆಗದಿದ್ದರೂ ಕವನಗಳಲ್ಲಿ ಅಡಗಿರುವ ಭಾವನೆಗಳು ಮನಸ್ಸನ್ನು ತಟ್ಟುವಲ್ಲಿ ಯಶಸ್ವಿಯಾದವು.
ಮಕ್ಕಳ ಕವನಗಳು ಸೇರಿದಂತೆ ಈ ಬಾರಿ ಒಟ್ಟು 77 ಕವನಗಳನ್ನು ಕವಿಗಳು ವಾಚಿಸಿ ಸಾಹಿತ್ಯಾಸಕ್ತರ ಮನ ಗೆದ್ದರು. ಕನ್ನಡದಲ್ಲಿ 25, ಕೊಡವ ಭಾಷೆಯಲ್ಲಿ 6, ಅರೆಭಾಷೆಯಲ್ಲಿ 6, ಇಂಗ್ಲೀಷ್‌ನಲ್ಲಿ 5, ಮಲಯಾಳಂನಲ್ಲಿ 2, ಕುಂಬಾರ ಭಾಷೆಯಲ್ಲಿ 2, ಹವ್ಯಕ ಭಾಷೆಯಲ್ಲಿ 1, ಹಿಂದಿಯಲ್ಲಿ 2, ಬ್ಯಾರಿ ಭಾಷೆಯಲ್ಲಿ 2, ಬೈರಾ ಭಾಷೆಯಲ್ಲಿ 1, ಯರವ ಭಾಷೆಯಲ್ಲಿ 3 ಹಾಗೂ ತುಳುವಿನಲ್ಲಿ 4 ಕವನಗಳನ್ನು ಕವಿಗಳು ವಾಚಿಸಿದರು. 16 ಮಂದಿ ಪುಟಾಣಿಗಳು ಮಕ್ಕಳ ಕವನ ವಿಭಾಗದಲ್ಲಿ ಕವನ ವಾಚಿಸಿ ಗಮನ ಸೆಳೆದರು. ಮೂವರಿಗೆ ಚುಟುಕಗಳ ವಾಚನಕ್ಕೆ ಅವಕಾಶ ನೀಡಲಾಗಿತ್ತು. ಒಟ್ಟು 12 ಚುಟುಕಗಳು ಕಾವ್ಯಾಸಕ್ತರ ಗಮನ ಸೆಳೆದವು.
ಹವ್ಯಕ ಭಾಷೆಯಲ್ಲಿ 'ನೀನು ತಂಗಿಯು ಸಣ್ಣಕಿಪಾಗ' ಎನ್ನುವ ಕವನ ವಾಚಿಸಿದ ಹಿರಿಯರಾದ ಕಗ್ಗೋಡ್ಲುವಿನ ಭಾಗೀರಥಿ ಹುಲಿತಾಳ ಬದಲಾದ ಕಾಲಘಟ್ಟದಲ್ಲಿನ ಬೆಳವಣಿಗೆಗಳಿಗೆ ಅಕ್ಷರ ರೂಪ ಕೊಟ್ಟು ಎಲ್ಲಾ ಕೆಲಸಗಳಿಗೂ ಯಂತ್ರಗಳು ಬಂದಿರುವುದರಿAದ ಆರೋಗ್ಯದ ಮೇಲೆ ಆಗುತ್ತಿರುವ ಪರಿಣಾಮಗಳ ಬಗ್ಗೆ ಪರಿಣಾಮಕಾರಿ ಚಿತ್ರಣ ನೀಡುವಲ್ಲಿ ಯಶಸ್ವಿ ಆದರು. ಪ್ರತಿ ವರ್ಷವೂ ಕವಿಗೋಷ್ಠಿಯಲ್ಲಿ ವಿಭಿನ್ನ ಕವನಗಳ ಮೂಲಕ ಗಮನ ಸೆಳೆಯುವ ರಂಗಕರ್ಮಿ ಅಲ್ಲಾರಂಡ ವಿಠಲ್ ನಂಜಪ್ಪ ಈ ಬಾರಿ 'ಉಳುವ ಭೂಮಿಯಲಿ ಬೀಳುವ ಗೆರೆ ಅವಳು' ಎನ್ನುವ ಕವನದ ಮೂಲಕ ಸ್ತಿçÃಕುಲದ ತುಮುಲಗಳನ್ನು ತೆರೆದಿಟ್ಟರು.
ವಿಶಿಷ್ಟವಾದ ಕುಂಬಾರ ಭಾಷೆಯಲ್ಲಿ 'ಕುಂಬಾರ' ಎನ್ನುವ ಕವನ ಪ್ರಸ್ತುತ ಪಡಿಸಿದ ಉಡುಪಿಯ ಪುಷ್ಪ ಪ್ರಸಾದ್, ಕುಂಬಾರನ ಶ್ರಮ ಜೀವನವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದರು. ಮಣ್ಣಿನಿಂದ ವಿವಿಧ ಆಕಾರ, ಗಾತ್ರದ ಮಡಿಕೆಗಳನ್ನು ಮಾಡುವ ಕುಂಬಾರ ಮಣ್ಣಿನ ಗುಣ ತಿಳಿದವನು ಎನ್ನುವ ಮೂಲಕ ಕುಂಬಾರಿಕೆಯಲ್ಲಿ ಮಣ್ಣಿನ ಮಹತ್ವವನ್ನು ಬಣ್ಣಿಸುತ್ತಲೇ ಕುಂಬಾರನ ಚಕ್ರದಂತೆ ಸುತ್ತುವ ಅವರ ಬದುಕಿನ ಕತೆಯನ್ನು ಸಭಿಕರ ಮುಂದಿಟ್ಟರು. ವಿಶೇಷವಾದ ಬ್ಯಾರಿ ಭಾಷೆಯಲ್ಲಿ 'ಥೈಯಾ ಯಪ್ಪಳು ನೀಯು' ಎನ್ನುವ ಕವನ ವಾಚನ ಮಾಡಿದ ಗೋಣಿಕೊಪ್ಪಲಿನ ಎಸ್.ಎಂ. ರಜನಿ, ಯರವರ ಶ್ರಮ ಸಂಸ್ಕೃತಿಯ ಚಿತ್ರಣ ನೀಡಿದರು.
ಸುಳ್ಯದ ಡಾ. ಅನುರಾಧ ಕುರುಂಜಿ ಅವರು ತಮ್ಮ 'ನೆರಳು' ಕವನದಲ್ಲಿ ನೆರಳು ಬೆಳಕಿನ ಆಟದ ಗಮ್ಮತ್ತನ್ನು ಬಿಡಿಸಿಟ್ಟರು. ನಿರ್ಮಲ ಪೂವಯ್ಯ ಅವರ 'ನುಡಿಬೆಳಗು' ಕವನದಲ್ಲಿ ಹೆಣ್ಣಿನ ಭಾವನೆಗಳ ಅಭಿವ್ಯಕ್ತಿ ಕಂಡು ಬಂತು. ಮಡಿಕೇರಿಯ ಬಿ.ಬಿ. ಸೌಮ್ಯ ಶೆಟ್ಟಿ ಅವರ 'ನಿವೇದನೆ', ಬೆಂಗಳೂರಿನ ಅಯ್ಯೇಟಿ ಶೃತಿ ವೈದ್ಯ ಅವರ 'ಬಾಳ ಹಡಗಿನ ನಾವಿಕರು', ಕೊಡವ ಭಾಷೆಯಲ್ಲಿ ಅತ್ತೂರಿನ ಆರತಿ ಪೂಣಚ್ಚ ಕುಪ್ಪಂಡ ಅವರ 'ಅಣ್ಣತಮ್ಮಂಗ', ಅರೆಭಾಷೆಯಲ್ಲಿ ಕಟ್ರತನ ಲೀಲಾ ಅಯ್ಯಣ್ಣ ಅವರ 'ಪ್ರಕೃತಿ ವಿಕೋಪ', ತಾವೂರಿನ ಕರ್ಣಯ್ಯನ ಸುಶ್ಮಿತಾ ಮಧು ಅವರ 'ಬೊಳ್ಳಿನ ಬೇರ್' ಕವನಗಳು ಗಮನ ಸೆಳೆದವು.
ಇಂಗ್ಲೀಷ್‌ನಲ್ಲಿ ಗೋಣಿಕೊಪ್ಪಲಿನ ಕೆ.ಆರ್. ಮನ, ಮಡಿಕೇರಿಯ ಎನ್.ಜೆ. ಸಂಜನಾ ಹಾಗೂ ಬಿ.ಜಿ. ಅನಂತಶಯನ ಅವರ ಕವನಗಳು ಸಾಹಿತ್ಯಾಸಕ್ತರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿತು. ಮಕ್ಕಳ ಕವನ ವಿಭಾಗದಲ್ಲಿ ಅಮ್ಮ, ಅಪ್ಪನ ಬಗ್ಗೆ ಸಮವರ್ಥ, ತಂದೆಯ ಬಗ್ಗೆ ಮಡಿಕೇರಿಯ ತೇಜಸ್, ದಸರಾ ವೈಭವದ ಬಗ್ಗೆ ಮಡಿಕೇರಿಯ ಪಿ.ಎಸ್. ಅಂಜಲಿ ಹಾಗೂ ಮಳೆ ರಜೆ ಬಗ್ಗೆ ತಿಷ್ಯಾ ಪೊನ್ನೇಟಿ ಕನ್ನಡದಲ್ಲಿ ವಾಚಿಸಿದ ಕವನಗಳು ಆಕರ್ಷಿಸಿದವು. ಇಂಗ್ಲೀಷ್‌ನಲ್ಲಿ ಬಾಡನ ಪ್ರಥಮ್ ಚಿಣ್ಣಪ್ಪ, ಬಾಡನ ತಪಶಾ ಲೋಕೇಶ್ ಅವರ ಕವನಗಳು ಗಮನ ಸೆಳೆದವು.
ಸಾಮಾನ್ಯವಾಗಿ ಮಡಿಕೇರಿ ದಸರಾ ಕವಿಗೋಷ್ಠಿ ಸಂದರ್ಭದಲ್ಲಿ ಮೋಡ ಕವಿದ ವಾತಾವರಣ ಇರುತ್ತಿತ್ತು. ಆದರೆ ಈ ವರ್ಷ ಮಳೆಯ ಅಬ್ಬರ ಜೋರಿತ್ತು. ಆದರೂ ಕವಿಮನಸುಗಳು ಕಲಾಸಂಭ್ರಮ ವೇದಿಕೆಯ ಕಚಗುಳಿ ಕೊಡುವ ಚಳಿಯ ಮಧ್ಯೆಯೇ ಕವನಗಳನ್ನು ಆಸ್ವಾದಿಸುತ್ತಿದ್ದ ದೃಶ್ಯ ಕವನಗಳ ಮುಂದೆ ಯಾವ ಮಳೆಯೂ ಲೆಕ್ಕಕ್ಕಿಲ್ಲ ಎನ್ನುವಂತಿತ್ತು.