ಜಿಲ್ಲೆ

ಕಾವೇರಿ ತುಲಾ ಸಂಕ್ರಮಣ ಸಂಭ್ರಮ

ಸುನಿಲ್ ಪೊನ್ನೇಟಿ

ಭಾಗಮಂಡಲ:

ಮಾತೆ ಕಾವೇರಿ ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ಕೊಡುತ್ತಾಳೆ ಎಂದು ನಂಬಲಾಗುವ ಪವಿತ್ರ ತೀರ್ಥೊದ್ಭವ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಭಾಗಮಂಡಲ ಮತ್ತು ತಲಕಾವೇರಿಗೆ ಆಗಮಿಸಿದ ಭಕ್ತರು ಪುಣ್ಯ ಸ್ನಾನ ಮಾಡಿ, ದೇವರ ದರ್ಶನ ಪಡೆದು ಪುನೀತರಾದರು. ಈ ಬಾರಿ ಬುಧವಾರ ನಸುಕಿನ ೧.೨೭ರ ಸಮಯದಲ್ಲಿ ತೀರ್ಥೋದ್ಭವ ಸಂಭವಿಸುತ್ತಿರುವುದರಿಂದ ಈ ಪುಣ್ಯಕ್ಷಣಕ್ಕೆ ಸಾಕ್ಷಿಯಾಗಲು ಭಕ್ತರು ತಡರಾತ್ರಿಯಲ್ಲೂ ಕ್ಷೇತ್ರಕ್ಕೆ ಆಗಮಿಸುತ್ತಿದ್ದ ದೃಶ್ಯ ಕಂಡುಬಂತು. ಮಧ್ಯಾಹ್ನದ ನಂತರ ಮಳೆ ಶುರುವಾದ ಕಾರಣ ತೀರ್ಥೋದ್ಭವ ಸಿದ್ಧತೆಗೆ ಸ್ವಲ್ಪ ಅಡಚಣೆ ಆಯಿತು.

ಒಂದು ತಿಂಗಳ ಕಾಲ ನಡೆಯುವ ಕಾವೇರಿ ತುಲಾಸಂಕ್ರಮಣ ಜಾತ್ರೆಯ ಸಂಭ್ರಮ ಕಾವೇರಿ ಉಗಮ ಸ್ಥಾನ ತಲಕಾವೇರಿ ಮತ್ತು ತ್ರಿವೇಣಿ ಸಂಗಮ ಕ್ಷೇತ್ರ ಭಾಗಮಂಡಲದಲ್ಲಿ ಮಂಗಳವಾರದಿಂದಲೇ ಕಾಣಿಸಿಕೊಂಡಿದೆ. ತೀರ್ಥೋದ್ಭವದ ನಂತರ ಕಿರು ಸಂಕ್ರಮಣದ ತನಕ ಇಲ್ಲಿ ಜಾತ್ರೆ ನಡೆಯುತ್ತದೆ. ಸಾಮಾನ್ಯವಾಗಿ ಪ್ರತಿ ವರ್ಷ ಅ.೧೭ರ ಬೆಳಗ್ಗೆಯಿಂದಲೇ ಈ ಎರಡೂ ಕ್ಷೇತ್ರಗಳಿಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು. ಆದರೆ ಈ ಬಾರಿ ನಸುಕಿನ ವೇಳೆ ತೀರ್ಥೋದ್ಭವ ಸಂಭವಿಸುತ್ತಿರುವುದರಿಂದ ಹಗಲಿನಲ್ಲಿ ಭಕ್ತರ ಸಂಖ್ಯೆ ಕಡಿಮೆ ಇತ್ತು.

ಮಂಗಳವಾರ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರ ಪೈಕಿ ಬಹುತೇಕರು ಚಾಮುಂಡಿ ಕಳದ ಬಳಿಯ ಕೇಶ ಮುಂಡನ ಸ್ಥಳಕ್ಕೆ ತೆರಳಿ ಕುಟುಂಬದ ಅಗಲಿದ ಹಿರಿಯರಿಗೆ ಗೌರವ ಸಲ್ಲಿಸುವ ಸಲುವಾಗಿ ಕೇಶ ಮುಂಡನ ಮಾಡಿಸಿಕೊಂಡು, ತ್ರಿವೇಣಿ ಸಂಗಮದ ಪಕ್ಕದಲ್ಲಿ ಪಿಂಡ ಪ್ರದಾನ ಮಾಡಿಸಿ ಕಾವೇರಿ, ಕನ್ನಿಕೆ ಹಾಗೂ ಸುಜ್ಯೋತಿ ನದಿಗಳ ಸ್ಥಳದಲ್ಲಿ ಪುಣ್ಯ ಸ್ನಾನ ಮಾಡುತ್ತಿದ್ದ ದಶ್ಯ ಸಾಮಾನ್ಯವಾಗಿತ್ತು.

ನಂತರ ಭಕ್ತರು ಶ್ರೀ ಭಗಂಡೇಶ್ವರ ದೇವಾಲಯಕ್ಕೆ ತೆರಳಿ ಮಹಾಗಣಪತಿ, ಮಹಾವಿಷ್ಣು, ಸುಬ್ರಹ್ಮಣ್ಯ ಹಾಗೂ ಭಗಂಡೇಶ್ವರ ದೇವರಿಗೆ ಪೂಜೆ ಸಲ್ಲಿಸಿದರು. ಕೆಲವರು ಶಾಂತಿಪೂಜೆಯನ್ನೂ ಮಾಡಿಸುತ್ತಿದ್ದರು.
ಜಾತ್ರೆ ಹಿನ್ನೆಲೆಯಲ್ಲಿ ಭಗಂಡೇಶ್ವರ ದೇವಾಲಯವನ್ನು ಹೂವು ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಭಕ್ತರ ಅನುಕೂಲಕ್ಕೋಸ್ಕರ ಧ್ವನಿವರ್ಧಕದ ಮೂಲಕ ನಿರಂತರವಾಗಿ ಮಾಹಿತಿ ಭಿತ್ತರಿಸಲಾಗುತ್ತಿತ್ತು. ಮಧ್ಯಾಹ್ನ ನಂತರ ಮಳೆ ಶುರುವಾಗಿದ್ದರಿಂದ ಭಕ್ತರು, ರಸ್ತೆ ಬದಿಯ ವ್ಯಾಪಾರಿಗಳು ತೊಂದರೆ ಅನುಭವಿಸಿದರು.

ಭಾಗಮಂಡಲದಲ್ಲಿ ಪೂಜೆ ಸಲ್ಲಿಸಿದ ಭಕ್ತರು ನಂತರ ತಲಕಾವೇರಿಗೆ ಭೇಟಿ ನೀಡುತ್ತಿದ್ದರು. ಬ್ರಹ್ಮಕುಂಡಿಕೆಯಿಂದ ತೀರ್ಥ ಪ್ರೋಕ್ಷಣೆ ಮಾಡಿಸಿಕೊಂಡು ಕಾವೇರಿ, ಗಣಪತಿ ಹಾಗೂ ಅಗಸ್ತೇಶ್ವರ ಸನ್ನಿಧಿಯಲ್ಲಿ ಪೂಜೆ ನೆರವೇರಿಸಿದರು. ತಲಕಾವೇರಿಯಲ್ಲೂ ಬ್ರಹ್ಮಕುಂಡಿಕೆ, ಪವಿತ್ರ ಕೊಳ, ಗಣಪತಿ, ಅಗಸ್ತ್ಯೇಶ್ವರ ಗುಡಿಗಳನ್ನು ವಿಶೇಷವಾಗಿ ಸಿಂಗರಿಸಲಾಗಿತ್ತು.

ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ನೇತೃತ್ವದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ೨ ಡಿವೈಎಸ್‌ಪಿ, ೯ ಪೊಲೀಸ್ ಇನ್ಸ್‌ಪೆಕ್ಟರ್, ೧೫ ಸಬ್ ಇನ್ಸ್‌ಪೆಕ್ಟಗಳು, ೩೦ ಮಂದಿ ಸಹಾಯಕ ಸಬ್ ಇನ್ಸ್‌ಪೆಕ್ಟರ್‌ಗಳು, ೩೫೦ ಹೆಡ್ ಕಾನ್ಸಟೇಬಲ್, ಪೊಲೀಸರು, ಗೃಹ ರಕ್ಷಕದಳದವರು ಬಂದೋಬಸ್ಥ್ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಎರಡೂ ಕಡೆಗಳಲ್ಲೂ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದು ವಿದ್ಯಮಾನಗಳ ಮೇಲೆ ಗಮನ ಕೇಂದ್ರೀರಿಸಲಾಗಿದೆ. ಕೆಎಸ್‌ಆರ್‌ಟಿಸಿ ವತಿಯಿಂದ ಭಾಗಮಂಡಲ ಮತ್ತು ತಲಕಾವೇರಿಗೆ ೨೦ ಉಚಿತ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಭಾಗಮಂಡಲದಿಂದ ತಲಕಾವೇರಿ ತನಕವೂ ಸುಮಾರು ೮ ಕಿಮೀ ಉದ್ದಕ್ಕೆ ರಸ್ತೆಯುದ್ದಕ್ಕೂ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದ್ದು, ಪಾದಯಾತ್ರೆ ಮೂಲಕ ತಲಕಾವೇರಿಗೆ ತೆರಳುವವರಿಗೆ ಅನುಕೂಲ ಮಾಡಿಕೊಡಲಾಗಿದೆ.

ಬುಧವಾರ (ಅ.೧೮) ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗಮಂಡಲ ಮತ್ತು ತಲಕಾವೇರಿಗೆ ಆಗಮಿಸುವ ನಿರೀಕ್ಷೆ ಇದ್ದು, ಭಕ್ತರಿಗೆ ಯಾವುದೇ ರೀತಿಯಲ್ಲಿ ಸಮಸ್ಯೆ ಆಗದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಜಾತ್ರೆಯ ಒಂದು ತಿಂಗಳು ತಲಕಾವೇರಿಯಲ್ಲಿ ಮತ್ತು ಎಲ್ಲಾ ದಿನಗಳಲ್ಲಿ ಭಾಗಮಂಡಲದಲ್ಲಿ ಭಕ್ತರಿಗೆ ಅನ್ನದಾನ ವ್ಯವಸ್ಥೆ ಮಾಡಲಾಗಿದೆ.