water protest 
ಜಿಲ್ಲೆ

ಕರ್ನಾಟಕದ ವಿರುದ್ಧ ತಮಿಳುನಾಡಿನಲ್ಲಿ ಪ್ರತಿಭಟನೆ

ವಿಜಯವಾಣಿ ಸುದ್ದಿಜಾಲ ಹೊಸೂರು
ಕಾವೇರಿ ನೀರು ಬಿಡಲು ನಿರಾಕರಿಸಿದ ಕರ್ನಾಟಕ ಸರ್ಕಾರದ ಕ್ರಮ ಖಂಡಿಸಿ ತಮಿಳುನಾಡಿನಲ್ಲಿ ಪ್ರತಿಭಟನೆ ಶುರುವಾಗಿದೆ. ಕೃಷ್ಣಗಿರಿ ಜಿಲ್ಲೆಯ ಹೊಸೂರು ಸಮೀಪದ ಜುಜುವಾಡಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ತಮಿಳುನಾಡು ರೈತರ ರಕ್ಷಣಾ ಸಂಘದಿಂದ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಕರ್ನಾಟಕದ ಗಡಿಯಲ್ಲಿ ಮುತ್ತಿಗೆ ಹಾಕಲು ಯತ್ನಿಸಿದ ರೈತರನ್ನು ಪೊಲೀಸರು ತಡೆದರು.
ಸಂಘದ ಸಂಸ್ಥಾಪಕ ಅಧ್ಯಕ್ಷ ವಕೀಲ ಈಸಣ್ಣ ಮುರುಗಸ್ವಾಮಿ ಮಾತನಾಡಿ, ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ತಮಿಳುನಾಡಿಗೆ 98 ಟಿಎಂಸಿ ನೀರು ನೀಡಬೇಕಿದ್ದರೂ ಕೇವಲ 13 ಟಿಎಂಸಿ ನೀರು ಮಾತ್ರ ಬಿಡಲಾಗಿದೆ. ಕರ್ನಾಟಕದ ಅಣೆಕಟ್ಟುಗಳಲ್ಲಿ ಸಾಕಷ್ಟು ನೀರಿದ್ದರೂ ಕರ್ನಾಟಕ ಸರ್ಕಾರ ತಮಿಳುನಾಡಿಗೆ ನೀರು ಬಿಡಲು ನಿರಾಕರಿಸಿರುವುದು ಸಂವಿಧಾನಬಾಹಿರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಕ್ಷಿಣ ಪಿನಾಕಿನಿಗೆ ಬೆಂಗಳೂರು ನಗರದ ಒಳಚರಂಡಿ ತ್ಯಾಜ್ಯ ಹರಿಸುತ್ತಿರುವುದರಿಂದ ನದಿ ನೀರು ಕಲುಷಿತಗೊಂಡಿದೆ. ಇದರಿಂದ ಕೃಷ್ಣಗಿರಿ, ಧರ್ಮಪುರಿ, ತಿರುವಣ್ಣಾಮಲೈ, ವಿಲ್ಲುಪುರಂ ಜಿಲ್ಲೆಗಳಲ್ಲಿ ರೈತರಿಗೆ ಬೆಳೆ ಬೆಳೆಯಲು ತೊಂದರೆಯಾಗುತ್ತಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.
ರೈತ ಸಂಘದ ಉಪ ಕಾರ್ಯದರ್ಶಿ ಸತೀಶ್, ಸಾವಯವ ಕೃಷಿ ಸಂಘಟನೆ ಅಧ್ಯಕ್ಷ ವೇಲುಸಾಮಿ, ರಾಜ್ಯ ಮಹಿಳಾ ತಂಡದ ಉಪಕಾರ್ಯದರ್ಶಿ ನಾಗರಾಣಿ, ಪ್ರಚಾರ ಕಾರ್ಯದರ್ಶಿ ತಮಿಳ್ ಸೆಲ್ವಂ, ಉಪ ಪ್ರಧಾನ ಕಾರ್ಯದರ್ಶಿ ನೇತಾಜಿ, ಸೇಲಂ ಜಿಲ್ಲಾ ಉಪ ಕಾರ್ಯದರ್ಶಿ ಸುರೇಶ್, ರಾಜ್ಯ ಯುವ ಉಪ ಕಾರ್ಯದರ್ಶಿ ಉದಯ ಕುಮಾರ್, ಕೃಷ್ಣಗಿರಿ ಜಿಲ್ಲಾ ಸಾವಯವ ಕೃಷಿ ತಂಡದ ಕಾರ್ಯದರ್ಶಿ ನಾರಾಯಣ ರೆಡ್ಡಿ, ಜಿಲ್ಲಾ ಉಪ ಕಾರ್ಯದರ್ಶಿ ಶಿವರಾಜ್, ಜಿಲ್ಲಾ ಯುವ ಕಾರ್ಯದರ್ಶಿ ಮಲ್ಲೇಶ್ ನಾರಾಯಣನ್, ಮಹಿಳಾ ತಂಡದ ಜಿಲ್ಲಾ ಕಾರ್ಯದರ್ಶಿ ರಾಣಿ ಇತರರಿದ್ದರು.