ಮೈಸೂರು: ತಮಿಳುನಾಡಿಗೆ ಹರಿಸುತ್ತಿರುವ ನೀರು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಶುಕ್ರವಾರ ಪ್ರತಿಭಟನೆ ನಡೆಯಿತು.
ರಾಜ್ಯದಲ್ಲಿ ಬರಗಾಲ ಸ್ಥಿತಿ ನಿರ್ಮಾಣವಾಗಿದ್ದು, ವಾಡಿಕೆಯಷ್ಟು ಮಳೆ ಆಗಿಲ್ಲ. ಈಗಾಗಲೇ 236 ತಾಲೂಕುಗಳ ಪೈಕಿ 192 ತಾಲೂಕುಗಳು ಬರಪೀಡಿತ ಎಂದು ಘೋಷಿಸಲಾಗಿದೆ. ಕಾವೇರಿ ಕಣಿವೆ ಭಾಗದಲ್ಲಿ ಬರ ಪರಿಸ್ಥಿತಿ ಇದೆ. ಕೆಆರ್‌ಎಸ್ ಜಲಾಶಯದಲ್ಲಿ ಉಳಿದಿರುವುದು ಕೇವಲ 20 ಟಿಎಂಸಿ ನೀರು ಮಾತ್ರ. ಅದರಲ್ಲಿ ಬಳಕೆಗೆ ಸಿಗುವುದು 15 ಟಿಎಂಸಿ ಮಾತ್ರ. ಇಂತಹ ಪರಿಸ್ಥಿತಿಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತಮಿಳುನಾಡಿಗೆ 7 ಟಿಎಂಸಿ ನೀರು ಹರಿಸಲು ಆದೇಶಿಸಿರುವುದು ದುರದೃಷ್ಟಕರ ಎಂದು ಕಿಡಿ ಕಾರಿದರು.
ಬೆಂಗಳೂರಿಗೆ ಪ್ರತಿ ತಿಂಗಳು ಕುಡಿಯುವ ನೀರಿಗೆ ಒಂದುವರೆ ಟಿಎಂಸಿ ನೀರು ಬೇಕು. ಕಾವೇರಿ ಕಣಿವೆಯ ರೈತರ ಹೊಲ ಗದ್ದೆಗಳಿಗೆ ಎಲ್ಲಿಂದ ನೀರು ತರಲು ಸಾಧ್ಯ. ಮಂಡ್ಯ ಭಾಗದ ರೈತರು ನೀರಿಗಾಗಿ ಏನು ಮಾಡಬೇಕು? ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಕಾವೇರಿ ನಿರ್ವಹಣಾ ಪ್ರಾಧಿಕಾರದ ಆದೇಶ ಪಾಲಿಸಬಾರದು. ರಾಜ್ಯದ ಸಂಸದರು ದೆಹಲಿಯಲ್ಲಿ ಧರಣಿ ನಡೆಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು. ಒಂದು ವೇಳೆ ನೀರು ಬಿಟ್ಟರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಕರವೇ ಜಿಲ್ಲಾಧ್ಯಕ್ಷ ಪ್ರವೀಣಕುಮಾರ್ ಇತರರು ಇದ್ದರು.