ಉಡುಪಿ: ಅಮಿತಾಬ್ ಬಚ್ಚನ್ ನಡೆಸುತ್ತಿರುವ ಕೌನ್ ಬನೇಗಾ ಕರೋಡ್‌ಪತಿ ಸ್ಟೂಡೆಂಟ್ ವೀಕ್ ಸ್ಪೆಷಲ್‌ನ ಕ್ವಿಜ್ ಸ್ಪರ್ಧೆಯಲ್ಲಿ ನಗರದ ವಿದ್ಯೋದಯ ಪಬ್ಲಿಕ್ ಸ್ಕೂಲ್ 7ನೇ ತರಗತಿ ವಿದ್ಯಾರ್ಥಿ ಅನಮಯ ಯೋಗೇಶ್ ದಿವಾಕರ್ 50 ಲಕ್ಷ ರೂ. ಬಹುಮಾನ ಗೆದ್ದಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ವೇದಾಂತು ಆನ್‌ಲೈನ್ ಲರ್ನಿಂಗ್ ಆ್ಯಪ್‌ನಲ್ಲಿ ಅ.5ರಿಂದ 25ರ ವರೆಗೆ ಆನ್‌ಲೈನ್ ಕ್ವಿಜ್ ಆಯೋಜಿಸಲಾಗಿತ್ತು. ದೇಶದಾದ್ಯಂತ ಸುಮಾರು 1.5 ಲಕ್ಷ ವಿದ್ಯಾರ್ಥಿಗಳು ಭಾಗವಹಿಸಿದ್ದರು. 1000 ಸಾವಿರ ವಿದ್ಯಾರ್ಥಿಗಳು ಪ್ರಥಮ ಹಂತದಲ್ಲಿ ಆಯ್ಕೆಯಾಗಿದ್ದು, ಇದರಲ್ಲಿ ಅತೀ ಹೆಚ್ಚು ಅಂಕ ಪಡೆದ 200 ವಿದ್ಯಾರ್ಥಿಗಳಿಗೆ ಸಂದರ್ಶನ ನಡೆದಿತ್ತು. ಅಂತಿಮ ಸುತ್ತಿನ ಸ್ಪರ್ಧೆಗೆ ದೇಶಾದ್ಯಂತ 8 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಅನಮಯ ಅವರಿಗೂ ಅವಕಾಶ ಲಭಿಸಿತ್ತು. ಸೋನಿ ವಾಹಿನಿಯಲ್ಲಿ ಡಿ.14ರಿಂದ 16ರ ವರೆಗೆ ಕ್ವಿಜ್ ಪ್ರಸಾರವಾಗಿದೆ. 3ನೇ ಸ್ಪರ್ಧಿಯಾಗಿ ಭಾಗವಹಿಸಿದ್ದ ಅನಮಯ 14 ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದ್ದು, 15ನೇ ಪ್ರಶ್ನೆಗೆ ಉತ್ತರಿಸುವ ಆಯ್ಕೆಯಿಂದ ಹಿಂದಕ್ಕೆ ಸರಿದು 50 ಲಕ್ಷ ಬಹುಮಾನ ತನ್ನದಾಗಿಸಿಕೊಂಡಿದ್ದಾರೆ.
ಬಹಳ ಇಷ್ಟಪಟ್ಟು ಕಾರ್ಯಕ್ರಮದಲ್ಲಿ ಅನಮಯ ಭಾಗವಹಿಸಿದ್ದ. 15ನೇ ಪ್ರಶ್ನೆ 1 ಕೋಟಿ ರೂ. ಮೊತ್ತದ್ದಾಗಿತ್ತು. ಆದರೆ 14 ಪ್ರಶ್ನೆಗಳಿಗೆ ಉತ್ತರ ನೀಡಿ ಗರಿಷ್ಠ ಬಹುಮಾನ ಪಡೆದಿರುವುದು ಸಂತಸ ತಂದಿದೆ. ತೆರಿಗೆ ಕಳೆದು ಉಳಿದ ಮೊತ್ತವನ್ನು ಮಗನ ಹೆಸರಿನಲ್ಲಿ ನಿಖರ ಠೇವಣಿ ಇಡಲಾಗುತ್ತದೆ. ಆತನಿಗೆ 18 ವರ್ಷ ತುಂಬಿದ ಮೇಲೆ ಈ ಹಣ ತೆಗೆಯಲು ಸಾಧ್ಯವಾಗಲಿದೆ.
- ದಿವಾಕರ್ ಅಜ್ಜರಕಾಡು, ವಿದ್ಯಾರ್ಥಿಯ ತಂದೆ