ಬೆಳಗಾವಿ: ಬಸವರಾಜ ಕಟ್ಟಿಮನಿ ಅವರ ಸಮಗ್ರ ಸಾಹಿತ್ಯ ಪ್ರಕಟಗೊಂಡಿದ್ದು, ಅವರ ಪತ್ರಿಕಾ ಬರಹಗಳ ವಿವಿಧ ಸಂಪುಟಗಳೂ ಮುದ್ರಣಗೊಂಡಿವೆ. ಈಗ ಕಟ್ಟಿಮನಿ ಅವರ ಪ್ರಗತಿಶೀಲ ಆಶಯಗಳ ಮರು ಆಂದೋಲನವಾಗಬೇಕಾದ ಅಗತ್ಯವಿದೆ ಎಂದು ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಅಧ್ಯಕ್ಷ ಡಾ. ಯಲ್ಲಪ್ಪ ಹಿಮ್ಮಡಿ ಹೇಳಿದರು.
ನಗರದ ಬಸವರಾಜ ಕಟ್ಟಿಮನಿ ಪ್ರತಿಷ್ಠಾನದಿಂದ ಪ್ರತಿಷ್ಠಾನದ ಸುಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ನೂತನ ಅವಧಿಯ ಕಾರ್ಯ ಯೋಜನೆಗಳ ಕುರಿತು ಸ್ಥಳೀಯ ಸಾಹಿತಿ ಚಿಂತಕರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ಬಸವರಾಜ ಕಟ್ಟಿಮನಿ ಅವರು ಪ್ರಗತಿಶೀಲ ಚಳವಳಿಯ ಮುಖ್ಯ ಲೇಖಕರಾಗಿದ್ದರು. ಅವರ ಪ್ರಗತಿಶೀಲ ಪರಂಪರೆ ಚಿಂತನ ಮಾಲೆ ಮತ್ತು ಸಾಹಿತ್ಯ ಮಾಲಿಕೆಗಳ ಮೂಲಕ ಸಾಮಾನ್ಯ ಓದುಗರಿಗೂ ತಲುಪಿಸುವ ಯೋಜನೆ ರೂಪಿಸಿದ್ದೇವೆ ಎಂದರು.
ಹಿರಿಯ ಸಾಹಿತಿಗಳಾದ ಡಾ. ರಾಮಕೃಷ್ಣ ಮರಾಠೆ, ಯ.ರು. ಪಾಟೀಲ, ರವಿ ಕೋಟಾರಗಸ್ತಿ ಮಾತನಾಡಿ, ಬಸವರಾಜ ಕಟ್ಟಿಮನಿ ಅವರ ಜನ್ಮಸ್ಥಳ ಮಲಾಮರಡಿಯಲ್ಲಿ ಸಮಾಧಿ ಸ್ಮಾರಕ ಮತ್ತು ಸಭಾಭವನ ನಿರ್ಮಾಣವಾಗಬೇಕಿದೆ ಎಂದರು.
ಸಾಹಿತಿ ಡಾ. ಸರಜೂ ಕಾಟ್ಕರ್, ಡಾ.ಎಸ್.ಎಸ್.ಅಂಗಡಿ ಮಾತನಾಡಿ, ದೇಶದ ವಿವಿಧ ಭಾಗಗಳಲ್ಲಿರುವ ಪ್ರಗತಿಪಂತದ ಹಿರಿಯ ಬರಹಗಾರರನ್ನೊಳಗೊಂಡ ಸಮ್ಮೇಳನವನ್ನು ಕರ್ನಾಟಕದಲ್ಲಿ ನಡೆಸಬೇಕು ಎಂದರು.
ಹೃಷಿಕೇಶ ದೇಸಾಯಿ, ಬಿ.ಎಸ್.ಗವಿಮಠ, ಡಾ. ಡಿ.ಎಸ್. ಚೌಗಲೆ, ಸುನಂದಾ ಎಮ್ಮಿ, ಆಶಾ ಯಮಕನಮರಡಿ ಮಾತನಾಡಿದರು.
ಸಭೆಯಲ್ಲಿ ಡಾ.ಪಿ.ಜಿ. ಕೆಂಪಣ್ಣವರ, ಡಾ. ಗುರುದೇವಿ ಹುಲೆಪ್ಪನವರಮಠ, ಶಿರೀಷ್ ಜೋಶಿ, ಎ.ಎ. ಸನದಿ, ಡಾ.ಎಸ್.ಎಂ. ಗಂಗಾಧರಯ್ಯ, ಡಾ. ಎ.ಬಿ. ಘಾಟಗೆ, ಶಿವಯೋಗಿ ಕುಸುಗಲ್, ನದೀಮ್ ಸನದಿ, ಸದಸ್ಯರಾದ ಎಸ್.ಜಿ. ಚಿಕ್ಕನರಗುಂದ ಇತರರಿದ್ದರು.
ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ವಿದ್ಯಾವತಿ ಭಜಂತ್ರಿ ಸ್ವಾಗತಿಸಿದರು. ಡಾ. ಕೆ.ಆರ್.ಸಿದ್ದಗಂಗಮ್ಮ ನಿರೂಪಿಸಿದರು. ಸದಸ್ಯರಾದ ಡಾ. ಜೆ.ಪಿ. ದೊಡ್ಡಮನಿ ವಂದಿಸಿದರು.