ಜಿಲ್ಲೆ

15ರಂದು ಮೇಳದ ದೇವರು, ಪರಿಕರಗಳ ಭವ್ಯ ಮೆರವಣಿಗೆ : ಕಟೀಲು 7ನೇ ಮೇಳ ಪ್ರಾರಂಭದ ಸಿದ್ಧತಾ ಸಭೆಯಲ್ಲಿ ತೀರ್ಮಾನ

ಕಟೀಲು: ನ.16ರಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಯಕ್ಷಗಾನ ಮಂಡಳಿಯ ಏಳನೆಯ ಮೇಳದ ಪದಾರ್ಪಣೆ ಹಾಗೂ ಏಳೂ ಮೇಳಗಳ ತಿರುಗಾಟ ಆರಂಭ ಸಲುವಾಗಿ ನವೆಂಬರ್ 15ರಂದು ಬಜಪೆಯಿಂದ ಕಟೀಲುವರೆಗೆ ನಡೆಯಲಿರುವ ಮೇಳಗಳ ದೇವರು, ಪರಿಕರಗಳ ಮೆರವಣಿಗೆಯ ಸಿದ್ಧತಾ ಸಭೆ ಬಜಪೆ ಶಾಂತಿಭವನ ವಠಾರದಲ್ಲಿ ನಡೆಯಿತು.

ಮೆರವಣಿಗೆಯನ್ನು ಅದ್ದೂರಿಯಾಗಿ ನಡೆಸಲಾಗುವುದು. ಅಲ್ಲಲ್ಲಿ ದ್ವಾರಗಳನ್ನು ನಿರ್ಮಿಸಲಾಗುವುದು. ಬಜಪೆಯಿಂದ ಕಟೀಲುವರೆಗೆ ಬಂಟಿಂಗ್ಸ್ ಅಲಂಕಾರ ಮಾಡಲಾಗುವುದು. ಇದಕ್ಕಾಗಿ ಆಯಾಯ ಪ್ರದೇಶದವರು ಮುಂದೆ ಬಂದಿದ್ದಾರೆ. ಮೂರು ಗಂಟೆಗೆ ಮೆರವಣಿಗೆ ಹೊರಟು, ಎಕ್ಕಾರಿನಿಂದ ಐದು ಗಂಟೆಗೆ ಕಾಲ್ನಡಿಗೆಯಲ್ಲಿ ಮೆರವಣಿಗೆ ಮೂಲಕ ಕಟೀಲನ್ನು ತಲುಪುವುದು. ಎಕ್ಕಾರಿನಲ್ಲಿ ಪಾನೀಯ, ಕಟೀಲು ಬಸ್ ನಿಲ್ದಾಣದಲ್ಲಿ ಫಲಾಹಾರದ ವ್ಯವಸ್ಥೆ ಮಾಡಲಾಗುವುದು. ಹತ್ತರಿಂದ ಹದಿನೈದು ಸಾವಿರ ಮಂದಿ ಮೆರವಣಿಗೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು.

ಕಟೀಲು ದೇಗುಲದ ಅರ್ಚಕರಾದ ಅನಂತ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ, ಐಕಳ ಗಣೇಶ ಶೆಟ್ಟಿ, ಯಕ್ಷಧರ್ಮ ಬೋಧಿನಿ ಟ್ರಸ್ಟ್‌ನ ರಾಘವೇಂದ್ರ ಆಚಾರ್ಯ, ರವಿರಾಜ ಆಚಾರ್ಯ, ಯಾದವ ಕೋಟ್ಯಾನ್, ಶೇಖರ ಶೆಟ್ಟಿ ಪೆರ್ಮುದೆ, ಲೋಕೇಶ್ ಪೂಜಾರಿ ಬಜಪೆ, ರತ್ನಾಕರ ಶೆಟ್ಟಿ ಎಕ್ಕಾರು, ಈಶ್ವರ ಕಟೀಲು, ಅದ್ಯಪಾಡಿ ಹರೀಶ್ ಶೆಟ್ಟಿ, ವರಪ್ರಸಾದ ಶೆಟ್ಟಿ, ಜಯಂತ ಸುವರ್ಣ, ಭುಜಂಗ ಕುಲಾಲ್ ಮುಂತಾದವರಿದ್ದರು.

ಪ್ರಚಾರದ ಸ್ಟಿಕ್ಕರ್ ಬಿಡುಗಡೆ

ಈಗಾಗಲೇ ಅನೇಕ ತಂಡಗಳು ನೋಂದಾಯಿಸಿದ್ದು, ನಾಲ್ಕು ನೂರಕ್ಕೂ ಹೆಚ್ಚು ಮಂದಿ ಕುಣಿತ ಭಜನೆಯಲ್ಲಿ ಭಾಗವಹಿಸಲಿದ್ದಾರೆ. ಇನ್ನೂ ಅನೇಕ ತಂಡಗಳು ನೋಂದಾಯಿಸುತ್ತಿದ್ದಾರೆ. ನೂರಕ್ಕೂ ಹೆಚ್ಚು ಚೆಂಡೆ, ಕೊಂಬು, ಡೋಲುಗಳು ಮೆರವಣಿಗೆಯಲ್ಲಿ ಇರಲಿವೆ. ಮೇಳಗಳ ದೇವರ ಏಳು ಸ್ತಬ್ಧಚಿತ್ರಗಳನ್ನು ಭಕ್ತರು ಈಗಾಗಲೇ ಸೇವಾರೂಪದಲ್ಲಿ ವ್ಯವಸ್ಥೆಗೊಳಿಸಿದ್ದಾರೆ. ಏಳನೆಯ ಮೇಳಕ್ಕೆ ಬೇಕಾದ ದೇವರ ಕಿರೀಟ, ಬಂಗಾರದ, ಬೆಳ್ಳಿಯ ಪರಿಕರಗಳನ್ನು ಸೇವಾದಾರರು ಒದಗಿಸಿಕೊಟ್ಟಿದ್ದಾರೆ. ಮೆರವಣಿಗೆಯಲ್ಲಿ ಡಿಜೆ ಹಾಗೂ ನಾಸಿಕ್ ಬ್ಯಾಂಡ್‌ಗಳಿಗೆ ಅವಕಾಶ ಕೊಟ್ಟಿಲ್ಲ ಎಂದು ಮಾಹಿತಿಗಳನ್ನು ಸಂಘಟಕರು ಸಭೆಯ ಮುಂದಿಟ್ಟರು. ಇದೇ ಸಂದರ್ಭ ನೂತನ ಮೇಳದ ಪ್ರಚಾರದ ಸ್ಟಿಕ್ಕರ್ ಬಿಡುಗಡೆ ಮಾಡಲಾಯಿತು.