ಮಂಗಳೂರು : ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜರಗಲಿರುವ ನವರಾತ್ರಿ ಪೂಜೆ ಮತ್ತು ಲಲಿತ ಪಂಚಮಿ ಮಹೋತ್ಸವ ಸಂದರ್ಭ ಸುಗಮ ಸಂಚಾರಕ್ಕಾಗಿ ಅ.7ರಿಂದ 13ರವರೆಗೆ ಬೆಳಗ್ಗೆ 6ರಿಂದ ರಾತ್ರಿ 11ರವರೆಗೆ ವಾಹನ ನಿಲುಗಡೆ ನಿಷೇಧ ಹಾಗೂ ವಾಹನ ಸಂಚಾರದಲ್ಲಿ ತಾತ್ಕಾಲಿಕ ಮಾರ್ಪಾಡು ಮಾಡುವಂತೆ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಆದೇಶ ಹೊರಡಿಸಿದ್ದಾರೆ.
ಮಂಗಳೂರು ಬಜಪೆ ಕಡೆಯಿಂದ ಕಟೀಲಿಗೆ ಬರುವ ವಾಹನಗಳು ಮಲ್ಲಿಗೆಯಂಗಡಿ ಕ್ರಾಸ್‌ನಿಂದ ಏಕಮುಖವಾಗಿ ಚಲಿಸಿ, ಗಿಡಿಗೆರೆ ರಸ್ತೆ ಮೂಲಕ ಕಟೀಲು ಕಾಲೇಜು ಮುಖ್ಯ ರಸ್ತೆ ಸೇರಬೇಕು. ಕಟೀಲಿನಿಂದ ಮಂಗಳೂರು ಕಡೆಗೆ ಹೋಗುವ ವಾಹನಗಳು ದೇವಸ್ಥಾನದ ಪದವಿ ಪೂರ್ವ ಕಾಲೇಜು ಮೈದಾನದ ಮೂಲಕ ಬ್ಯಾಂಕ್ ಆಫ್ ಬರೋಡಾ ಎದುರುಗಡೆ ರಸ್ತೆಯಲ್ಲಿ ಚಲಿಸಿ ಬಜಪೆ-ಮಂಗಳೂರು ಕಡೆಗೆ ಸಂಚರಿಸಬೇಕು. ಉಲ್ಲಂಜೆ ರಸ್ತೆಯಿಂದ ಮಂಗಳೂರು ಕಡೆಗೆ ಹೋಗುವ ವಾಹನಗಳು ಮತ್ತು ಮಲ್ಲಿಗೆಯಂಗಡಿಯಿಂದ ಕಟೀಲು/ಮಂಗಳೂರು ಕಡೆಗೆ ಹೋಗುವ ವಾಹನಗಳು ಮಲ್ಲಿಗೆಯಂಗಡಿ ಜಂಕ್ಷನ್‌ನಿಂದ ಗಿಡಿಗೆರೆ ರಸ್ತೆಗೆ ಏಕಮುಖವಾಗಿ ಚಲಿಸಿ ಕಟೀಲು ಕಾಲೇಜು ಮುಖ್ಯ ರಸ್ತೆಯನ್ನು ಸೇರಬೇಕು.
ಕಾರು ಹಾಗೂ ಇತರ ವಾಹನಗಳಿಗೆ ಪದವಿ ಪೂರ್ವ ಕಾಲೇಜು ಮೈದಾನ, ಸಿದ್ಧ ಪ್ರದೇಶಗಳಲ್ಲಿ ವಾಹನಗಳ ಪಾಕಿರ್ಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ. ರಥ ಬೀದಿಯಲ್ಲಿ ವಾಹನಗಳ ಸಂಚಾರ ಹಾಗೂ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ (ವಾಹನ ಪೂಜೆಗೆ ಸಂಬಂಧಿಸಿದ ವಾಹನಗಳನ್ನು ಹೊರತುಪಡಿಸಿ) ಎಂದು ಆದೇಶದಲ್ಲಿ ತಿಳಿಸಲಾಗಿದೆ.