ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿಯಲ್ಲಿ 22.72 ಕೋಟಿ ರೂ. ವೆಚ್ಚದಲ್ಲಿ ಓವರ್ ಪಾಸ್ ನಿರ್ಮಿಸಲು ಕೇಂದ್ರ ಭೂ ಸಾರಿಗೆ ಇಲಾಖೆ ತಾತ್ವಿಕ ಅನುಮೋದನೆ ನೀಡಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಟಪಾಡಿ ಪ್ರದೇಶದಲ್ಲಿ ಅಂಡರ್‌ಪಾಸ್ ಅವಶ್ಯಕತೆಯಿದೆ ಎಂಬ ಸಾರ್ವಜನಿಕರ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ. 2019ರಲ್ಲಿ ಕೇಂದ್ರ ಭೂ ಸಾರಿಗೆ ಸಚಿವರನ್ನು ಭೇಟಿಯಾಗಿ ಕಟಪಾಡಿ ನಗರ ಪ್ರದೇಶವಾಗಿದ್ದು, ಹೆಚ್ಚಿನ ಜನ ಸಂಚಾರವಿರುವ ಕಾರಣದಿಂದ ರಾಷ್ಟ್ರೀಯ ಹೆದ್ದಾರಿಯನ್ನು ದಾಟಲು ಅಂಡರ್ ಪಾಸ್ ಅಥವಾ ಓವರ್ ಪಾಸ್ ಅನಿವಾರ್ಯತೆಯಿದೆ ಎಂದು ಮನದಟ್ಟು ಮಾಡಲಾಗಿತ್ತು. ಇಲಾಖೆ ಕಟಪಾಡಿಯಲ್ಲಿ ಅಂಡರ್‌ಪಾಸ್ ಬದಲು, ಓವರ್ ಪಾಸ್ ನಿರ್ಮಿಸಲು ತಾತ್ವಿಕ ಅನುಮೋದನೆ ನೀಡಿದೆ. ಇದರಿಂದ ಕಟಪಾಡಿ, ಬಂಟಕಲ್, ಶಿರ್ವ, ಮಟ್ಟು, ಬೆಳ್ಮಣ್ ಪ್ರದೇಶದ ನಿವಾಸಿಗಳಿಗೆ ಸಹಕಾರಿಯಾಗಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿಸ್ತೃತ ಯೋಜನಾ ವರದಿ ತಯಾರಿಸುತ್ತಿದ್ದು, ಮುಂದಿನ ತಿಂಗಳಲ್ಲಿ ಪೂರ್ಣ ವಿವರ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.