ಜಿಲ್ಲೆ

ಕುರಿ ಕಾಯುತ್ತಿದ್ದ ಹುಡುಗ ಪಿಎಸ್‌ಐ ಪಾಸ್!

ಮಂಜುನಾಥ ಗದಗಿನ ಬೆಳಗಾವಿ ಲಕ್ಷ ಲಕ್ಷ ದುಡ್ಡು ಕೊಟ್ಟು ಕೋಚಿಂಗ್ ಪಡೆದರೂ ಒಂದು ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಇಂದಿನ ದಿನಗಳಲ್ಲಿ ಕಷ್ಟಸಾಧ್ಯವಾಗಿದೆ. ಆದರೆ, ಇಲ್ಲೊಬ್ಬ ಯುವಕ ಹತ್ತು ಸರ್ಕಾರಿ ನೌಕರಿ ಪಡೆದುಕೊಂಡು ಇದೀಗ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿ ಇತರರಿಗೂ ಮಾದರಿಯಾಗಿದ್ದಾನೆ. ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದ ಕರೆಪ್ಪ ಕುರವಿನಕೊಪ್ಪ ಈ ಸಾಧಕ. ಸಾಧನೆಗೆ ಬಡತನ ಅಡ್ಡಿಯಲ್ಲ ಎಂದು ಸಾಧಿಸಿ ತೋರಿಸಿದ್ದಾನೆ. ಚಿಕ್ಕ ವಯಸ್ಸಿನಲ್ಲೇ ತಂದೆ-ತಾಯಿ ಕಳೆದುಕೊಂಡು ಅಜ್ಜನ ಆಶ್ರಯದಲ್ಲಿ ಬೆಳೆದ ಕರೆಪ್ಪ. ಅಂದೇ ದುಡಿದು ಅಂದೇ ತಿನ್ನುವ ಪರಿಸ್ಥಿತಿಯಲ್ಲಿ ನಿತ್ಯ ಕುರಿ ಕಾಯುತ್ತಾ ಶಾಲೆಗೆ ರಜೆ ಇದ್ದ ಸಮಯದಲ್ಲಿ ಮದುವೆ ಪೆಂಡಾಲ್ ಹಾಕಲೂ ಹೋಗುತ್ತಿದ್ದ. ಇಂತಹ ಕಷ್ಟಕರ ಪರಿಸ್ಥಿತಿಯಲ್ಲಿ ಶ್ರಮವಹಿಸಿ ಓದಿ ಡಿಗ್ರಿ ಮುಗಿಸಿದ. ನಂತರ ಕೆಲಸ ಮಾಡುತ್ತಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿ 2014ರಲ್ಲೇ ಕೆಎಸ್‌ಐಎಸ್‌, ಕೆಎಸ್‌ಆರ್‌ಪಿ ನೌಕರಿ ಪಡೆದುಕೊಂಡನು. ಇದರಲ್ಲಿ ಕೆಎಸ್‌ಐಎಸ್‌ ಆಯ್ಕೆ ಮಾಡಿಕೊಂಡು ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಿದರು. ಕೆಲಸದೊಂದಿಗೆ ಓದುನನಗೆ ಸರ್ಕಾರಿ ಕೆಲಸ ಸಿಕ್ಕಿತು, ಇನ್ನೇನು ಸಾಕು ಎಂದು ಕರೆಪ್ಪ ಓದುವುದನ್ನು ಬಿಡಲಿಲ್ಲ. ಬೆಂಗಳೂರಿನಂತಹ ಮಹಾನಗರದಲ್ಲಿ ಕೆಲಸ ಮಾಡುತ್ತಲೇ ತನ್ನ ಓದು ಮುಂದುವರೆಸಿದರ ಪರಿಣಾಮವಾಗಿ 2015 9ನೇ ರ‌್ಯಾಂಕ್‌ನೊಂದಿಗೆ ರೈಲ್ವೆ ಇಲಾಖೆಗೆ ಆಯ್ಕೆ, 2016ರಲ್ಲಿ 316 ರ‌್ಯಾಂಕ್‌ನೊಂದಿಗೆ ಎಸ್‌ಡಿಎ, 2017ರಲ್ಲಿ ಸಿವಿಲ್ ಪೊಲೀಸ್ ಕಾನ್ಸ್‌ಸ್ಟೇಬಲ್ ಪರೀಕ್ಷೆ ಬರೆದು ಅದರಲ್ಲಿ 15 ಸ್ಥಾನ ಪಡೆದುಕೊಂಡನು. ಸ್ವಂತ ಜಿಲ್ಲೆ ಬೆಳಗಾವಿಯಲ್ಲೇ ಈ ನೌಕರಿ ಸಿಕ್ಕಿದ್ದರಿಂದ ಇದನ್ನೇ ಆಯ್ಕೆ ಮಾಡಿಕೊಂಡು ಬೆಳಗಾವಿ ಶಹಾಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ಹಾಜರಾದರು. ಇಷ್ಟಕ್ಕೆ ಬಿಡದೇ ಎಲ್ಲೆಲ್ಲೆ ಕರ್ತವ್ಯಕ್ಕೆ ಹಾಕುತ್ತಾರೋ ಅಲ್ಲಿ ಪುಸ್ತಕ ಓದಿ ಮತ್ತೆ ಸ್ಪರ್ಧಾತ್ಮಕ ಪರೀಕ್ಷೆ ಬರೆದರು. ಆಗ ಮತ್ತೆ ಎಸ್‌ಡಿಎಗೆ ಆಯ್ಕೆಯಾದವರು. ಈ ನೌಕರಿಯೂ ಬೇಡವೆಂದು ಮತ್ತೆ ಓದಿದರು.ಕೆಎಎಸ್ ಕನಸು:ಗುರಿ ದೊಡ್ಡದು ಇದ್ದಾಗ ಮಾತ್ರ ನಾವು ಸಾಧನೆ ಮಾಡಲು ಸಾಧ್ಯ ಎಂಬುವುದನ್ನು ಅರಿತಿದ್ದ ಕರೆಪ್ಪ ಯಾವುದೇ ಕೋಚಿಂಗ್ ಪಡೆಯದೇ ಕೆಎಎಸ್ ಓದಲು ಆರಂಭಿಸಿದರು. ಎರಡು ಸಾರಿ ಕೆಎಎಸ್ ಪರೀಕ್ಷೆ ಸಹಿತ ಬರೆದರು. ಆದರೆ, 2021ರಲ್ಲಿ ಕೆಎಎಸ್ ಪರೀಕ್ಷೆ ಬರೆದು ಮೆನ್ಸ್‌ಗೂ ಆಯ್ಕೆಗೊಂಡರು. ಅದು ಕೈಗೂಡಲಿಲ್ಲ.ಎರಡು ಬಾರಿ ಪಿಎಸ್‌ಐಗೆ ಆಯ್ಕೆಕುರಿ ಕಾಯುವ ಹುಡುಗನೊಬ್ಬ ಇದೀಗ ಪಿಎಸ್‌ಐ ಹುದ್ದೆ ಪಡೆದುಕೊಂಡಿದ್ದಾನೆ ಎಂದರೆ ಸಾಮಾನ್ಯದ ಮಾತಲ್ಲ. ಇದರ ಹಿಂದೆ ಆ ಯುವಕನ ಶ್ರಮ, ಏಕಾಗ್ರತೆ ತುಂಬಾ ಇದೆ. ಪೊಲೀಸ್ ಕಾನ್ಸ್‌ಸ್ಟೇಬಲ್ ನೌಕರಿ ಮಾಡುತ್ತಲೇ ಎರಡು ಸಾರಿ ಪಿಎಸ್‌ಐ ಪರೀಕ್ಷೆ ಬರೆದ. ಆಯ್ಕೆಯಾಗಲಿಲ್ಲ. ಸೋಲೇ ಗೆಲುವಿನ ಸೋಪಾನ ಎಂದು ಮತ್ತೆ 2022ರಲ್ಲಿ 545 ಹುದ್ದೆಗಳಿಗೆ ಕರೆದಿದ್ದ ಪಿಎಸ್‌ಐ ಪರೀಕ್ಷೆ ಬರೆದು ಐದನೇ ರ‌್ಯಾಂಕ್‌ನೊಂದಿಗೆ ಆಯ್ಕೆಗೊಂಡರು. ಆದರೆ, ಈ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಈ ಆಯ್ಕೆ ರದ್ದುಗೊಳಿಸಲಾಯಿತು. ಇದೇ ವೇಳೆ ಎ್ಡಿಎ ಪರೀಕ್ಷೆ ಬರೆದಿದ್ದರಿಂದ 2022ರಲ್ಲಿ ಎ್ಡಿಎಗೆ ಆಯ್ಕೆಗೊಂಡು ಇದೀಗ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ಖಜಾನೆ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪಿಎಸ್‌ಐ ಆಗಬೇಕು ಎಂಬ ಕನಸು ಇಷ್ಟಕ್ಕೆ ಬಿಡಲಿಲ್ಲ. ಮತ್ತ್ತೆ 402 ಸಿವಿಲ್ ಪಿಎಸ್‌ಐಗೆ ಕರೆದಾಗ ಪರೀಕ್ಷೆ ಬರೆದು ಇದೀಗ ಪಿಎಸ್‌ಐ ಹುದ್ದೆಗೆ ಆಯ್ಕೆಗೊಂಡಿದ್ದಾರೆ. ಈ ಮೂಲಕ ಸಾಧನೆ ಸಾಧಕನ ಸ್ವತ್ತೇ ಹೊರತು ಸೋಮಾರಿಗಳ ಸ್ವತ್ತಲ್ಲ. ಶ್ರಮ, ದೃಢ ಸಂಕಲ್ಪ, ಏಕಾಗ್ರತೆ ಇದ್ದರೆ ಎಲ್ಲವನ್ನು ಸಾಧಿಸಬಹುದು ಎಂಬುವುದನ್ನು ಸಾಧಿಸಿ ತೋರಿಸಿದ್ದಾರೆ.ಪಿಎಸ್‌ಐ ಹುದ್ದೆಗೆ ಆಯ್ಕೆಗೊಂಡಿದ್ದಕ್ಕೆ ತುಂಬಾ ಸಂತಸವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಾನು ಯಾವುದೇ ಕೋಚಿಂಗ್ ಪಡೆದುಕೊಂಡಿಲ್ಲ. ಏಳೆಂಟು ವರ್ಷಗಳಿಂದ ನಿರಂತರವಾಗಿ ಓದುತ್ತಾ ಇದ್ದೇನೆ. ಹೀಗಾಗಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನನಗೆ ಯಶಸ್ಸು ಸಿಕ್ಕಿದೆ. ಇದಕ್ಕೆ ನನ್ನ ಪತ್ನಿ ಸಹಕಾರ ಕೂಡ ತುಂಬಾ ಇದೆ.ಕರೆಪ್ಪ ಕುರವಿನಕೊಪ್ಪ, ಪಿಎಸ್‌ಐ ಹುದ್ದೆಗೆ ಆಯ್ಕೆಗೊಂಡವರು.