ಕೆ.ಎಂ.ದೊಡ್ಡಿ: ಏತ ನೀರಾವರಿ ಯೋಜನೆಯ ಸಣ್ಣ-ಪುಟ್ಟ ಸಮಸ್ಯೆಗಳನ್ನು ನಿವಾರಿಸಿ ಶೀಘ್ರವೇ ರೈತರ ಜಮೀನುಗಳಿಗೆ ನೀರುಣಿಸಲು ಕ್ರಮವಹಿಸಲಾಗುವುದು ಎಂದು ಶಾಸಕ ಕದಲೂರು ಉದಯ್ ತಿಳಿಸಿದರು.
ಸಮೀಪದ ಕ್ಯಾತಘಟ್ಟ ಏತ ನೀರಾವರಿ ಕಾಮಗಾರಿ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಕ್ಯಾತಘಟ್ಟ, ಮಠದದೊಡ್ದಿ, ಮಳ್ಳಿಮೇಳೆದೊಡ್ಡಿ ಸೇರಿದಂತೆ ಇತರ ಗ್ರಾಮಗಳ ಸಾವಿರಾರು ಎಕರೆಗೆ ನೀರುಣ್ಣಿಸುವ ಏತ ನೀರಾವರಿ ಯೋಜನೆಗೆ ಸರ್ಕಾರದಿಂದ ಇನ್ನೂ ಹೆಚ್ಚಿನ ಅನುದಾನ ತಂದು ಕಾಮಗಾರಿ ಪೂರ್ಣಗೊಳಿಸಲು ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಮದ್ದೂರು ಕ್ಷೇತ್ರದ ಅಭಿವೃದ್ಧಿಗೆ ಮೊದಲ ಹಂತದಲ್ಲಿ ಸರ್ಕಾರದಿಂದ ಸುಮಾರು 200 ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನ ತಂದು ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಇತರ ಮೂಲ ಸೌಲಭ್ಯ ಕಲ್ಪಿಸಲು ಶ್ರಮಿಸಲಾಗುವುದು ಎಂದರು.
ಸಾರ್ವಜನಿಕರು ಶಾಸಕರ ಕಚೇರಿ ಸೇರಿದಂತೆ ಪಕ್ಷದ ಕಚೇರಿಗೆ ಆಗಮಿಸಿ ಹೇಳುವ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಲಾಗುತ್ತದೆ. ಆರೋಗ್ಯ ಸಮಸ್ಯೆ ಹೊಂದಿರುವವರಿಗೆ ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಹಾಯ ಧನ ನೀಡಲಾಗುತ್ತಿದೆ ಎಂದರು. ಕದಲೂರು ಗ್ರಾ.ಪಂ.ಅಧ್ಯಕ್ಷ ಕದಲೂರು ತಿಮ್ಮೇಗೌಡ, ಮಾಜಿ ಅಧ್ಯಕ್ಷ ವಿಜಯಕುಮಾರ್, ಮುಖಂಡರಾದ ಕೃಷ್ಣ, ಮರಿಸ್ವಾಮಿ, ಅಜ್ಜಹಳ್ಳಿ ಮನು ಹಲವರಿದ್ದರು.