ಕೊಪ್ಪ: ಪಶ್ಚಿಮಘಟ್ಟ ಪ್ರದೇಶದ ರಕ್ಷಣೆ ಸಂರಕ್ಷಣೆಗೆ ಈಗಾಗಲೇ ಕಾನೂನು ನೀತಿ ನಿಯಮ ಇರುವುದರಿಂದ ಹೊಸ ಮಾನದಂಡದ ಅವಶ್ಯಕತೆ ಇಲ್ಲ. ಕಸ್ತೂರಿ ರಂಗನ್ ವರದಿ ಅವೈಜ್ಞಾನಿಕವಾಗಿದ್ದು, ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಶೇಷ ಗ್ರಾಮ ಸಭೆ ನಡೆಸಿ ತಕ್ಷಣ ತಕರಾರು ಅರ್ಜಿ ಸಲ್ಲಿಸಬೇಕು ಎಂದು ಮಲೆನಾಡು ಕರಾವಳಿ ಜನಪರ ಒಕ್ಕೂಟದ ಕಾರ್ಯದರ್ಶಿ ಸುಧೀರ್ ಕುಮಾರ್ ಮುರೊಳ್ಳಿ ಒತ್ತಾಯಿಸಿದರು.
ಸಾಮಾಜಿಕ ಸಂಘ ಸಂಸ್ಥೆಗಳು ವರದಿಗೆ ಆಕ್ಷೇಪಿಸಬೇಕು, ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ಒಳಪಡುವ ಪ್ರದೇಶಗಳ ಶಾಸಕರು, ಸಂಸದರು ಈ ವಿಚಾರದಲ್ಲಿ ಎಚ್ಚೆತ್ತುಕೊಳ್ಳಬೇಕು, ವರದಿ ಯಥಾವತ್ತಾಗಿ ಜಾರಿಯಾಗದಂತೆ ನೋಡಿಕೊಳ್ಳಬೇಕು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ವಿಚಾರದಲ್ಲಿ ರಾಜಕೀಯೇತರವಾಗಿ ಮಾತನಾಡಬೇಕು. ಹೋರಾಟ ಹತ್ತಿಕ್ಕಬಾರದು. ಬಾಳೆಹೊನ್ನೂರಿನಲ್ಲಿ ನಡೆದ ಸಭೆಯಲ್ಲಿ ರಂಭಾಪುರಿ ಶ್ರೀಗಳು, ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿ ಅವರು ರೈತ ಪರ ಹೋರಾಟ ಬೆಂಬಲಿಸುವುದಾಗಿ ಹೇಳಿದ್ದಾರೆ ಎಂದರು.
ಕಸ್ತೂರಿ ರಂಗನ್ ವರದಿ ಆಧರಿಸಿ ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ವಲಯ ಘೋಷಣೆ ಸಂಬಂಧ 6ನೇ ಕರಡು ಅಧಿಸೂಚನೆಗೆ ಮಲೆನಾಡು ಕರಾವಳಿ ಜನಪರ ಒಕ್ಕೂಟದಿಂದ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವರಿಗೆ ಹಾಗೂ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ ಕಾರ್ಯದರ್ಶಿಗಳಿಗೆ ಆಕ್ಷೇಪಣೆಯನ್ನು ಕಳುಹಿಸಲಾಗಿದೆ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಕ್ಕುಡಿಗೆ ರವೀಂದ್ರ, ಜಿಪಂ ಮಾಜಿ ಉಪಾಧ್ಯಕ್ಷ ಎ.ಎಸ್.ನಾಗೇಶ್, ಶಾನುವಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ನವೀನ್ ಕರುವಾನೆ, ಗ್ರಾಮಾಂತರ ಗ್ರಾಮ ಪಂಚಾಯಿತಿ ಸದಸ್ಯ ಉಸ್ಮಾನ್, ಪಟ್ಟಣ ಪಂಚಾಯಿತಿ ಸದಸ್ಯ ರಶೀದ್, ಮುಖಂಡರಾದ ನುಗ್ಗಿ ಮಂಜುನಾಥ್, ಜೇಸುದಾಸ್, ಎಲಿಯಾಸ್ ಪಿಂಟೋ ಇದ್ದರು.