ಸುಳ್ಯ: ಅರಣ್ಯದಂಚಿನ ಗ್ರಾಮಗಳ ಜನತೆಯ ಬದುಕಿನ ಹಕ್ಕನ್ನು ಕಸಿಯದಂತೆ ಕೆಲವೊಂದು ತಿದ್ದುಪಡಿಗಳನ್ನು ತಂದು ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸಬೇಕು ಎಂದು ಮಲೆನಾಡು ಜಂಟಿ ಕ್ರಿಯಾ ಸಮಿತಿ ಒತ್ತಾಯಿಸಿದೆ.
ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಮಾತನಾಡಿದ ಸಮಿತಿಯ ಸಂಚಾಲಕರಾದ ಕೆ.ಎಲ್.ಪ್ರದೀಪ್ ಕುಮಾರ್ ಹಾಗೂ ಅಶೋಕ್ ಎಡಮಲೆ ವರದಿ ಅನುಷ್ಠಾನ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮುಂದಾಗಬೇಕು. ಗೋದಾವರಿ ನದಿ ತಟದಿಂದ ಕನ್ಯಾಕುಮಾರಿ ತನಕ ಆರು ರಾಜ್ಯಗಳನ್ನು ಒಳಗೊಂಡಂತೆ ಇರುವ ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶದ ಉಳಿವಿಗೆ ವರದಿ ಜಾರಿಯಾಗಬೇಕಿದೆ. ಹದಿನೈದು ವರ್ಷಗಳಿಂದ ಪರಿಸರ ಸೂಕ್ಷ್ಮವರದಿಯನ್ನು ಜನ ವಿರೋಧಿಸಿದ ಕಾರಣ ಸೂಕ್ಷ್ಮ ಪ್ರದೇಶದಲ್ಲಿ ಲೀಸ್ ಆಧಾರದಲ್ಲಿ ಭೂಮಿ ಪಡೆದ ಶ್ರೀಮಂತರು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ವಿವಿಧ ಅವೈಜ್ಞಾನಿಕ ಯೋಜನೆ ಅನುಷ್ಠಾನದ ಮೂಲಕ ಹಲವು ಮಂದಿ ಲಾಭ ಪಡೆಯುತ್ತಿದ್ದಾರೆ.
ಆದ್ದರಿಂದ ಕಸ್ತೂರಿ ರಂಗನ್ ವರದಿಯನ್ನು ಜಾರಿ ಮಾಡಲು ನಮ್ಮ ಸಮಿತಿಯ ಸಂಪೂರ್ಣ ಬೆಂಬಲ ಇರುತ್ತದೆ. ಆದರೆ ಈ ವರದಿಯಲ್ಲಿ ಕೆಲವೊಂದು ಬೇಡಿಕೆಗಳನ್ನು ಸೇರ್ಪಡೆಗೊಳಿಸಬೇಕು. ಈ ಹಿಂದಿನ ಅನುಭೋಗ ಹಕ್ಕು, ಜಮ್ಮ, ಕಾನ, ಬಾನ ಸೊಪ್ಪಿನಬೆಟ್ಟ ಈ ಹಿಂದಿನಂತೆ ಊರ್ಜಿತಗೊಳಿಸಿ 100 ಮೀಟರ್‌ಗೆ ನಿಬರ್ಂಧಿಸಬೇಕು. ಈ ಯೋಜನೆ ಶೀಘ್ರದಲ್ಲಿ ಜಾರಿಗೊಳಿಸಿ ಈ ಯೋಜನೆ 6ನೇ ಕರಡು ಮಸೂದೆಯಲ್ಲಿ ಸಂವಿಧಾನದ 371 ವಿಧಿಯನ್ನು ಅಳವಡಿಸಬೇಕು ಎಂದರು. ಚೇತನ್ ಪಾನತ್ತಿಲ ಉಪಸ್ಥಿತರಿದ್ದರು.