ಜಿಲ್ಲೆ

ಕಸ್ತೂರಬಾ ಹಾಸ್ಟೆಲ್‌ಗೆ ಬಂದೀತೆ ಶುಕ್ರದೆಸೆ

ರವಿ ಎಸ್. ಬಳೂಟಗಿ

ಮಲ್ಲು ಕಳಸಾಪುರ ಲಕ್ಷ್ಮೇಶ್ವರ

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಗದಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಲೂಕಿನ ಗೊಜನೂರಿನ ಸರ್ಕಾರಿ ಕಸ್ತೂರಬಾ ಗಾಂಧಿ ಬಾಲಕಿಯರ ಹಾಸ್ಟೆಲ್‌ನಲ್ಲಿನ ಅವ್ಯವಸ್ಥೆಗೆ ಕಿಡಿಕಾರಿದ್ದರು. ಈ ಶಾಲೆಯ ಬಗ್ಗೆ ಹೆಚ್ಚಿನ ಮಾಹಿತಿಯೊಂದಿಗೆ ಬೆಂಗಳೂರಿಗೆ ಬರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸಚಿವರ ಈ ಮಾತು ಗ್ರಾಮಸ್ಥರು ಹಾಗೂ ಶಾಲೆಯ ಬಾಲಕಿಯರಲ್ಲಿ ಆಶಾಭಾವನೆ ಮೂಡಿಸಿದೆ.

ಹಗಲಲ್ಲಿ ಶಾಲೆ-ರಾತ್ರಿ ವಸತಿ

ಶಿಕ್ಷಣ ಇಲಾಖೆಯ ವ್ಯಾಪ್ತಿಯ ಕಸ್ತೂರಬಾ ಗಾಂಧಿ ಬಾಲಕಿಯ ವಸತಿ ನಿಲಯ ಹಲವು ವರ್ಷಗಳಿಂದ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದೆ. ಪ್ರಾರಂಭದಲ್ಲಿ ತಾತ್ಕಾಲಿಕವೆಂದು ಗ್ರಾಮದ ಸರ್ಕಾರಿ ಶಾಲೆಯ ಕೊಠಡಿಯಲ್ಲಿ ಪ್ರಾರಂಭಿಸಲಾಗಿತ್ತು. ಆದರೆ ಇದುವರೆಗೂ ಸ್ವಂತ ಕಟ್ಟವಿರಲಿ ಅನಕೂಲಕರ ಕಟ್ಟಡದ ಭಾಗ್ಯವೂ ಇಲ್ಲಿನ ಮಕ್ಕಳಿಗೆ ಸಿಕ್ಕಿಲ್ಲ. ಕಿಷ್ಕಿಂಧೆಯಂತಿರುವ ಕೊಠಡಿಯಲ್ಲೀ ಕಾಲ ಕಳೆಯುತ್ತಿದ್ದಾರೆ. ವಿದ್ಯಾರ್ಥಿನಿಯರು ಗ್ರಾಮದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಹೋಗುತ್ತಾರೆ. ಶಿಕ್ಷಣ ಇಲಾಖೆಯದ್ದೇ ಆಗಿದ್ದರಿಂದ ಶಾಲೆಯ ಒಂದಷ್ಟು ಕೊಠಡಿಗಳನ್ನು ಹಗಲಿನಲ್ಲಿ ತರಗತಿಗಳನ್ನಾಗಿ ಮತ್ತು ರಾತ್ರಿ ವಸತಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಶಾಲೆಯ 3 ಕೊಠಡಿಗಳನ್ನು ವಸತಿ ಶಾಲೆಗೆ ಬಳಸುವುದರಿಂದ ಶಾಲೆಯ ಮಕ್ಕಳಿಗೂ ಸಮಸ್ಯೆ ತಪ್ಪದಂತಾಗಿದೆ.

ಮೂಲಸೌಲಭ್ಯ ಕೊರತೆ: 6 ರಿಂದ 10ನೇ ತರಗತಿ ವರೆಗಿನ 84 ವಿದ್ಯಾರ್ಥಿನಿಯರನ್ನು 2 ಶಾಲಾ ಕೊಠಡಿಯಲ್ಲಿ ತುಂಬಲಾಗಿದೆ. ಬಟ್ಟೆ-ಬರೆ, ಹಾಸಿಗೆ, ಪುಸ್ತಕ, ದಿನಬಳಕೆ ವಸ್ತುಗಳನ್ನು ತುಂಬಿದ ಟ್ರಂಕ್‌ನೊಂದಿಗೆ ಒಂದು ಕೊಠಡಿಯಲ್ಲಿ 40ಕ್ಕೂ ಹೆಚ್ಚು ಬಾಲಕಿಯರು ನೆಲೆಸಿದ್ದಾರೆ. ಗಾಳಿ- ಬೆಳಕು ಇಲ್ಲದ ಕೊಠಡಿಯಲ್ಲಿ ಊಟ, ವಸತಿ, ಓದು ಎಲ್ಲವೂ. ಕಾಲು ಚಾಚಿ ನೆಮ್ಮದಿಯಿಂದ ನಿದ್ದೆ ಮಾಡಲೂ ಆಗುತ್ತಿಲ್ಲ. ಅಡುಗೆ ಕೊಠಡಿಯಲ್ಲೇ ವಾರ್ಡ್‌ನ್ ಇರುತ್ತಾರೆ. ಕಾರಿಡಾರ್‌ನಲ್ಲಿಯೇ ಊಟ, ಓದುವುದು. ಚಿಕ್ಕ ಶೌಚಗೃಹ, ಸ್ನಾನಗೃಹಕ್ಕೂ ಸರದಿ ನಿಲ್ಲಬೇಕಾಗಿದೆ. ಸರ್ಕಾರದಿಂದ ಬರುವ ಬೆಡ್‌ಗಳನ್ನು ಬಳಸಲು ಸ್ಥಳ ಇಲ್ಲದೆ ವಿದ್ಯಾರ್ಥಿನಿಯರು ನೆಲದ ಮೇಲೆ ಮಲಗುತ್ತಾರೆ. ಕೊಠಡಿಗಳೂ ಬರುಕು ಬಿಟ್ಟು, ಮಳೆ ಬಂದರೆ ಸೋರುತ್ತವೆ. ಶುದ್ಧ ನೀರು, ಶೌಚಗೃಹ, ಸ್ನಾನಗೃಹಕ್ಕೂ ಸಮಸ್ಯೆಯಿದೆ. ಕಾಯಂ ಸಿಬ್ಬಂದಿ ಇಲ್ಲ, ಹೊರಗುತ್ತಿಗೆ ಆಧಾರದ ಮೇಲೆ ವಾರ್ಡನ್, ಮೂವರು ಅಡುಗೆಯವರು, ಇಬ್ಬರು ವಾಚಮನ್ ಕಾರ್ಯನಿರ್ವಹಿಸುತ್ತಿದ್ದಾರೆ.

ಕಟ್ಟಡ ಮರೀಚಿಕೆ!

ಗ್ರಾಮದ ಗುಡ್ಡದಂಚಿನಲ್ಲಿ 2 5 ಎಕರೆ ಜಮೀನು ಕೊಡಲಾಗಿದೆ. ಅಧಿಕಾರಿಗಳ ತಪ್ಪಿನಿಂದ ಒಂದಷ್ಟು ವರ್ಷ ದಾಖಲೆ ತಿದ್ದುಪಡಿಗೆ ಸಮಯ ಕಳೆಯಿತು. ಕಟ್ಟಡ ನಿರ್ಮಾಣಕ್ಕೆ ಅನುದಾನಕ್ಕಾಗಿ ಪ್ರತಿ ವರ್ಷ ಕ್ರಿಯಾಯೋಜನೆಯೊಂದಿಗೆ ವರದಿ ಸಲ್ಲಿಸುತ್ತಾ ಬರಲಾಗಿದೆ. ಅಧಿಕಾರಿ ವರ್ಗ ಮತ್ತು ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಿಲಿಲ್ಲ. ಈಗ ಶಿಕ್ಷಣ ಸಚಿವರಿಂದಲಾದರೂ ಪರಿಹಾರ ದೊರೆಯುವುದೇ ಎಂಬ ನಿರೀಕ್ಷೆ ಮೂಡಿದೆ.