ಜಿಲ್ಲೆ

ಸಾಲದ ಮೇಲಿನ ಬಡ್ಡಿ ದರ ಕಡಿತಗೊಳಿಸಲು ಕಾಸಿಯಾ ಮನವಿ

ಬೆಂಗಳೂರು: ರಾಜ್ಯದ ಆರ್ಥಿಕತೆಯ ಬೆನ್ನೆಲುಬಾಗಿರುವ ಸೂಕ್ಷ್ಮಮತ್ತು ಸಣ್ಣ ಕೈಗಾರಿಕೆಗಳ (ಎಂಎಸ್‌ಎಂಇ) ಬೆಳವಣಿಗೆ ದೃಷ್ಟಿಯಿಂದ ಸಾಲದ ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡುವಂತೆ 16ನೇ ಹಣಕಾಸು ಆಯೋಗದ ಅಧ್ಯಕ್ಷ ಡಾ. ಅರವಿಂದ್ ಪನಗಾರಿಯಾ ಅವರಿಗೆ ಕಾಸಿಯಾ ಮನವಿ ಮಾಡಿದೆ.

ನಗರದಲ್ಲಿ ಗುರುವಾರ ಆಯೋಗದ ಮುಖ್ಯಸ್ಥರನ್ನು ಭೇಟಿ ಮಾಡಿದ ಕಾಸಿಯಾ ಅಧ್ಯಕ್ಷ ಎಂ.ಜಿ.ರಾಜಗೋಪಾಲ್ ನೇತೃತ್ವದ ನಿಯೋಗವು, ಎಂಎಸ್‌ಎಂಇ ಕ್ಷೇತ್ರವು ಹಲವು ಸಮಸ್ಯೆ ಹಾಗೂ ಸವಾಲುಗಳನ್ನು ಎದುರಿಸುತ್ತಿದೆ. ದೇಶಕ್ಕೆ ಹೆಚ್ಚಿನ ಜಿಡಿಪಿ ಕೊಡುಗೆ ನೀಡುವ ಜತೆಗೆ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಎಂಎಸ್‌ಎಂಇ ಮುಂಚೂಣಿಯಲ್ಲಿದ್ದು, ಈ ವಲಯದ ಬೆಳವಣಿಗೆಗೆ ಸರ್ಕಾರದ ಮೂಲಕ ಹೆಚ್ಚಿನ ಸೌಲಭ್ಯವನ್ನು ಒದಗಿಸಲು ಆಯೋಗ ಶಿಫಾರಸು ಮಾಡಬೇಕು ಎಂದು ವಿನಂತಿಸಿತು.

ಪ್ರವಾಸೋದ್ಯಮ ಮತ್ತು ಹೋಟೆಲ್ ಉದ್ಯಮ ಹಾಗೂ ಇತ್ತೀಚಿನ ಸವಾಲುಗಳಿಂದ ಹೆಚ್ಚು ಹಾನಿಗೊಳಗಾದ ವಲಯಗಳಿಗೆ ಹೆಚ್ಚಿನ ಸಬ್ಸಿಡಿ ಮತ್ತು ಅನುದಾನಗಳನ್ನು ನೀಡಬೇಕು. ಎಂಎಸ್‌ಎಂಇಗೆ ಜಿಎಸ್‌ಟಿ ಮತ್ತು ಇತರ ತೆರಿಗೆಗಳ ದರಗಳಲ್ಲಿ ಕಡಿತ ಮಾಡುವುದರಿಂದ ನಗದು ಹರಿವಿನ ಜತೆಗೆ ಸ್ಫರ್ಧಾತ್ಮಕತೆ ಹೆಚ್ಚಿಸಬಹುದಾಗಿದೆ. ಪ್ರಸ್ತುತ ರಾಜ್ಯದಲ್ಲಿ ಶೇ.90 ಕೈಗಾರಿಕೆಗಳು ಖಾಸಗಿ ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇವುಗಳಿಗೆ ಅನುಕೂಲವಾಗುವಂತೆ ಕೈಗಾರಿಕಾ ಕ್ಲಸ್ಟರ್‌ಗಳನ್ನು ಅಭಿವೃದ್ಧಿಪಡಿಸಿ, ಸುಧಾರಿತ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಬೆಂಬಲವನ್ನು ನೀಡುವಂತೆ ಮನವಿ ಮಾಡಿರುವುದಾಗಿ ಕಾಸಿಯಾ ಅಧ್ಯಕ್ಷರು ತಿಳಿಸಿದ್ದಾರೆ.