ಜಿಲ್ಲೆ

ಕಾಶ್ಮೀರಿ ಪಂಡಿತರಿಗೆ ರಕ್ಷಣೆ ಒದಗಿಸಲು ಪೇಜಾವರ ಶ್ರೀ ಒತ್ತಾಯ

ಗೋಪಾಲಕೃಷ್ಣ ಪಾದೂರ್

ಉಡುಪಿ: ಜಮ್ಮು ಕಾಶ್ಮೀರದಲ್ಲಿ ಹಿಂದೂ ಸಮುದಾಯದ ಹತ್ಯೆಗಳು ಮತ್ತೆ ಮುಂದುವರೆದಿರುವುದು ತೀವ್ರ ಕಳವಳಕಾರಿ ಸಂಗತಿ. ಮಂಗಳವಾರ ಸಹೋದರರಿಬ್ಬರ ಮೇಲೆ ನಡೆದ ಪೈಶಾಚಿಕ ಹಲ್ಲೆ ಖಂಡನೀಯ. ದುರ್ಘಟನೆಯಲ್ಲಿ ಓರ್ವ ಮೃತಪಟ್ಟು ಮತ್ತೋರ್ವನ ಸ್ಥಿತಿ ಗಂಭೀರವಾಗಿರುವ ಸುದ್ದಿ ತಿಳಿದು ತೀರಾ ಆಘಾತವಾಗಿದೆ. ಇಂಥಹ ಪೈಶಾಚಿಕ ಕೃತ್ಯಗಳಿಗೆ ಸಂಪೂರ್ಣ ವಿರಾಮ ಹಾಕಲು ಕೇಂದ್ರ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು. ಜತೆಗೆ ಕಾಶ್ಮೀರಿ ಪಂಡಿತರ ರಕ್ಷಣೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಗ್ರಹಿಸಿದ್ದಾರೆ.

ಪಂಡಿತರ ಹತ್ಯೆ ಅತ್ಯಂತ ಖಂಡನಾರ್ಹ. ಪಂಡಿತರನ್ನು ತಕ್ಷಣ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಬಗ್ಗೆ ಸರ್ಕಾರ ಶೀಘ್ರ ನಿರ್ಧಾರ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಶಿವಮೊಗ್ಗ ಘಟನೆಗೂ ಖೇದ: ಹರ್ಷ ಕೊಲೆ ನಂತರ ಒಂದಷ್ಟು ದಿನ ತಣ್ಣಗಾಗಿದ್ದ ಶಿವಮೊಗ್ಗದಲ್ಲಿ ಮತ್ತೆ ಕೋಮುಸಂಘರ್ಷ ನಡೆಯುತ್ತಿರುವುದು ಖೇದಕರ. ಸಮಾಜದ ಶಾಂತಿ ಕದಡುವ ಮನಸ್ಥಿತಿಯ ದುಷ್ಕರ್ಮಿಗಳಿಗೆ ಕಠಿಣವಾದ ಕಾನೂನಿನ ಅಂಕುಶವನ್ನು ಸರ್ಕಾರ ಹಾಕಬೇಕು ಎಂದು ಆಗ್ರಹಿಸಿದ್ದಾರೆ.