ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದಲ್ಲಿ ಮಂಗಳವಾರ ಗ್ರಾಮದ ಶ್ರೀ ಕಾಶಿ ವಿಶ್ವೇಶ್ವರ ಸ್ವಾಮಿ ದೇವರ ರಥೋತ್ಸವ ಸಾವಿರಾರು ಭಕ್ತರು ಹಾಗೂ ಸುತ್ತಮುತ್ತಲ ಗ್ರಾಮಸ್ಥರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. 
ಜಿಲ್ಲೆ

ವಿಜೃಂಭಣೆಯ ಕಾಶಿವಿಶ್ವೇಶ್ವರಸ್ವಾಮಿ ರಥೋತ್ಸವ

ರವಿಕುಮಾರ್ ಪಿ. ಕೆ

ಶ್ರೀರಂಗಪಟ್ಟಣ: ತಾಲೂಕಿನ ಮಹದೇವಪುರ ಗ್ರಾಮದಲ್ಲಿ ಮಂಗಳವಾರ ಶ್ರೀ ಕಾಶಿ ವಿಶ್ವೇಶ್ವರಸ್ವಾಮಿ ದೇವರ ಭವ್ಯ ರಥೋತ್ಸವ ಸಾವಿರಾರು ಜನರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಗ್ರಾಮದ ಕಾವೇರಿ ನದಿ ಸಮೀಪದಲ್ಲಿರುವ ದೇವಾಲಯದಲ್ಲಿ ಮುಂಜಾನೆಯಿಂದ ದೇವರಿಗೆ ಅರ್ಚಕ ವೆಂಕಟೇಶ್ ಮೂರ್ತಿ ನೇತೃತ್ವದಲ್ಲಿ ವಿಶೇಷ ಪೂಜೆಗಳು ನಡೆದವು. ಬಳಿಕ ಪಲ್ಲಕ್ಕಿಯಲ್ಲಿ ದೇವರ ಉತ್ಸವ ಮೂರ್ತಿಯನ್ನು ಹೊತ್ತುತಂದ ಭಕ್ತರು ಸರ್ವಾಲಂಕೃತ ಬೃಹತ್ ರಥದಲ್ಲಿ ಪ್ರತಿಷ್ಠಾಪಿಸಿದರು. ಮಧ್ಯಾಹ್ನ 12ರ ಶುಭ ಲಗ್ನದಲ್ಲಿ ಗ್ರಾಮದ ದೊಡ್ಡ ಯಜಮಾನರಾದ ಪ್ರಸನ್ನ ಹಾಗೂ ಶಿವರಾಮೇಗೌಡ, ಮುಖಂಡರಾದ ಬಸವೇಗೌಡ, ಚುಂಚೇಗೌಡ, ಬಸವರಾಜು ಸೇರಿದಂತೆ ಹಲವರ ಸಮ್ಮುಖದಲ್ಲಿ ತಾಲೂಕು ಆಡಳಿತದ ಪರವಾಗಿ ರಾಜಸ್ವ ನಿರೀಕ್ಷಕ ರೇವಣ್ಣ ರಥೋತ್ಸವಕ್ಕೆ ಚಾಲನೆ ನೀಡಿದರು.

ಬಳಿಕ ದೇವಾಲಯದ ಸುತ್ತಲೂ ಶ್ರೀ ಕಾಶಿ ವಿಶ್ವೇಶ್ವರಸ್ವಾಮಿ ದೇವರ ಬ್ರಹ್ಮರಥವನ್ನು ಅಸಂಖ್ಯಾತ ಭಕ್ತರು ಈಶ್ವರನ ವಿವಿಧ ನಾಮಸ್ಮರಣೆಯ ಭಕ್ತಿ ಭಾವದಲ್ಲಿ ಎಳೆದು ಸಂಭ್ರಮದಿಂದ ಸಂಪನ್ನಗೊಳಿಸಿದರು. ಈ ವೇಳೆ ಭಕ್ತರಿಗೆ ಕೆಲವರು ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಲಾಯಿತು.

ಮಹದೇವಪುರ, ಚನ್ನಹಳ್ಳಿ, ಬಿದರಹಳ್ಳಿ ಹುಂಡಿ, ತರಿಪುರ, ಶಾಂತಿಕೊಪ್ಪಲು, ಮೇಳಾಪುರ ಗ್ರಾಮಗಳ ಜನರಲ್ಲದೆ ಮಂಡ್ಯ, ಮೈಸೂರು ಕಡೆಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ತೀರ್ಥ, ಪ್ರಸಾದ ಸ್ವೀಕರಿಸಿದರು. ತಾಲೂಕು ಆಡಳಿತ ವತಿಯಿಂದ ಸಾವಿರಾರು ಜನರಿಗೆ ಅನ್ನಸಂತರ್ಪಣೆ ನಡೆಯಿತು.