ಜಿಲ್ಲೆ

ಕಾಶಿ ವಿಶ್ವನಾಥ ದರ್ಶನ 25ರಿಂದ

ವಿಜಯವಾಣಿ ಸುದ್ದಿಜಾಲ ಧಾರವಾಡ

ಮಹಾಶಿವರಾತ್ರಿ ನಿಮಿತ್ತ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯ ವತಿಯಿಂದ ಫೆ. 25ರಿಂದ 27ರವರೆಗೆ ವಿವಿಧ ಕಾರ್ಯಕ್ರಮಗಳು ಹಾಗೂ ಇಲ್ಲಿನ ಕಲಾಭವನ ಮೈದಾನದಲ್ಲಿ ಕಾಶಿ ವಿಶ್ವನಾಥ ದರ್ಶನ ಏರ್ಪಡಿಸಲಾಗಿದೆ ಎಂದು ಸಂಚಾಲಕಿ ಬಿಕೆ ಜಯಂತಿ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ . 25ರಂದು ಸಂಜೆ 6 ಗಂಟೆಗೆ ಕಾಶಿ ಮಹಾದ್ವಾರವನ್ನು ಐಐಟಿ ನಿರ್ದೇಶಕ ಪ್ರೊ. ವೆಂಕಪ್ಪಯ್ಯ ದೇಸಾಯಿ, ವಿಶ್ವನಾಥ ಮಂದಿರ ಗರ್ಭಗುಡಿಯನ್ನು ಹು-ಧಾ ಪಾಲಿಕೆ ಸಹಾಯಕ ಆಯುಕ್ತ ಅರವಿಂದ ಜಮಖಂಡಿ, ಆಧ್ಯಾತ್ಮಿಕ ಚಿತ್ರ ಪ್ರದರ್ಶನವನ್ನು ದೇವಕಿ ಯೋಗಾನಂದ, ಓಂ ನಮಃ ಶಿವಾಯ ಮಂಟಪವನ್ನು ಡಾ. ವೇದಮೂರ್ತಿ ಎ.ಬಿ, ಸ್ವ ಪರಿವರ್ತನಾ ಮಂಟಪವನ್ನು ಡಾ. ಎಸ್​.ಆರ್​. ಪ್ರಕಾಶ ನಾಯಕ ಉದ್ಘಾಟಿಸುವರು. ಅತಿಥಿಗಳಾಗಿ ಪ್ರದೋಷ ಮೋಹಾಂತಿ, ಪ್ರಶಾಂತ ಸಿದ್ದನಗೌಡರ, ಆನಂದರಾವ ಪಾಸ್ತೆ, ವಿನಾಯಕ ದೊಡ್ಡಮನಿ ಆಗಮಿಸುವರು. ನಗರದ ಮುದ್ರಣಾಲಯಗಳ ಮಾಲೀಕರಿಗೆ ಸನ್ಮಾನಿಸಲಾಗುವುದು ಎಂದರು.

ಫೆ . 26ರಂದು ಬೆಳಗ್ಗೆ 8 ಗಂಟೆಗೆ ಮರಾಠಾ ಕಾಲನಿಯಲ್ಲಿನ ಈಶ್ವರಿಯ ವಿಶ್ವ ವಿದ್ಯಾಲಯದಲ್ಲಿ ಶಿವ ಧ್ವಜಾರೋಹಣ ನೆರವೇರಿಸಲಾಗುವುದು. ಸಂಜೆ 6 ಗಂಟೆಗೆ ಕಲಾಭವನ ಮೈದಾನದಲ್ಲಿ ನಗರದ ಕಲಾವಿದರಿಂದ ಸಾಂಸ್ಕೃತಿಕ ಮಹೋತ್ಸವ, ನಡೆಯಲಿದೆ. ಫೆ. 27ರಂದು ನಗರದ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಂಚೆ ಪೇದೆಗಳಿಗೆ ಗೌರವಾರ್ಪಣೆ ಸಲ್ಲಿಸಲಾಗುವುದು.

ಇವೆಲ್ಲ ಕಾರ್ಯಕ್ರಮಗಳ ಪೂರ್ವದಲ್ಲಿ ಫೆ. 25ರಂದು ಬೆಳಗ್ಗೆ 9 ಗಂಟೆಯಿಂದ 21 ಕಾರುಗಳ ಮೇಲೆ ಜ್ಯೋತಿರ್ಲಿಂಗಗಳ ಮೆರವಣಿಗೆ ನಡೆಯಲಿದೆ. ನಗರದ ಎಲ್ಲ ವಾರ್ಡ್​ಗಳಲ್ಲಿ ಈ ಸದ್ಭಾವನಾ ಯಾತ್ರೆ ಮೂಲಕ ಶಿವನ ಸಂದೇಶ ನೀಡಲಾಗುವುದು. ಬ್ರಹ್ಮಕುಮಾರ, ಬ್ರಹ್ಮಕುಮಾರಿಯರು ಪಾಲ್ಗೊಳ್ಳಲಿದ್ದಾರೆ ಎಂಂದರು.

ಬಿಕೆ ವಾಣಿ, ಇತರರು ಇದ್ದರು.