ಜಿಲ್ಲೆ

ಕಾಶೀ ಮಠಾಧೀಶ ಸಂಯಮೀಂದ್ರ ತೀರ್ಥ ಸ್ವಾಮೀಜಿ ಚಾತುರ್ಮಾಸ್ಯ ದಿಗ್ವಿಜಯ ಮಹೋತ್ಸವ

ಕುಂದಾಪುರ: ಶ್ರೀ ಕಾಶೀ ಮಠದ ಪರಮ ಪೂಜ್ಯ ಸದ್ಗುರು ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಮಾನೋತ್ಸವ ವರ್ಷಾಚರಣೆಯ ಸಂದರ್ಭದಲ್ಲಿ ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ನಡೆಯುತ್ತಿರುವ ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಚಾತುರ್ಮಾಸ್ಯದ ದಿಗ್ವಿಜಯ ಮಹೋತ್ಸವ ಅ.26ರಂದು ನಡೆಯಲಿದ್ದು, ಇದರ ಪೂರ್ವಭಾವಿ ಸಭೆ ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆಯಿತು.

ದೇವಸ್ಥಾನದ ಆಡಳಿತ ಮೊಕ್ತೇಸರ ದಿನೇಶ್ ಜಿ.ಕಾಮತ್ ಮಾತನಾಡಿ, ಸಂಜೆ 6ಕ್ಕೆ ದಿಗ್ವಿಜಯ ಮಹೋತ್ಸವ ಆರಂಭವಾಗಲಿದ್ದು, ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಪುಷ್ಪಾಲಂಕೃತ ವಾಹನದಲ್ಲಿ ಸಂಚರಿಸಿ ಅನುಗ್ರಹಿಸಲಿದ್ದಾರೆ. ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಿಂದ ಆರಂಭಗೊಂಡು ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಬಲಕ್ಕೆ ತಿರುಗಿ ಎಂ.ವಿ. ರಸ್ತೆ ಮೂಲಕ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ಸಂಪನ್ನಗೊಳ್ಳಲಿದೆ. ಪ್ರಮುಖವಾಗಿ ಉಡುಪಿ, ದಕ್ಷಿಣ ಜಿಲ್ಲೆಯಿಂದ, ಕೇರಳ, ಮಹಾರಾಷ್ಟ್ರ, ಗೋವಾದಿಂದ 10 ಸಾವಿರಕ್ಕೂ ಮಿಕ್ಕಿ ಸಮಾಜದವರು ಆಗಮಿಸುವ ನಿರೀಕ್ಷೆ ಇದೆ. ಈಗಾಗಲೇ ಸಮಾಜದ ಎಲ್ಲ ದೇವಸ್ಥಾನಗಳಲ್ಲಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಲಾಗಿದೆ. ಸ್ವಾಮೀಜಿಯವರು ಪರ ಊರಿನ ಸಮಾಜದವರಿಗೆ ಪ್ರಸಾದ ನೀಡುವ ಸ್ಥಳ, ಸ್ವಯಂಸೇವಕರ ತಂಡ ರಚನೆ, ವಾಹನಗಳ ಪಾರ್ಕಿಂಗ್ ಸ್ಥಳ, ತಿಂಡಿ ಕೌಂಟರ್ ವ್ಯವಸ್ಥೆ ಮಾಹಿತಿ ನೀಡಿದರು. ದೇವಸ್ಥಾನದ ಆಡಳಿತ ಸಮಿತಿ, ಚಾತುರ್ಮಾಸ್ಯ ಸಮಿತಿ ಸದಸ್ಯರು, ಸಮಾಜದವರು ಉಪಸ್ಥಿತರಿದ್ದರು.