ಜಿಲ್ಲೆ

ಸಂಧ್ಯಾ ಸರಸ್ವತಿಗೆ ವರದಾನವಾದ ಅದಾಲತ್ : ಅಸ್ವಸ್ಥ ಮಗುವಿನ ಚಿಕಿತ್ಸೆಗೆ ನೆರವು : ಬಗೆಹರಿದ ಜಾಗದ ಸಮಸ್ಯೆ

ಸೌಮ್ಯ ಆರ್

ಉಪ್ಪಳ: ತಲಸ್ಸೇಮಿಯಾದಿಂದ ಬಳಲುತ್ತಿರುವ ಮಗುವಿಗೆ ಸಚಿವರಿಂದ ಅದಾಲತಿನಲ್ಲಿ ಸಾಂತ್ವನ ದೊರಕಿದೆ. ಪುತ್ರಿಗೆ ಅಂಗವೈಕಲ್ಯ ಕಾರ್ಡ್, ವಿಶೇಷ ಚೇತನ ಪಿಂಚಣಿ, ಚಿಕಿತ್ಸಾ ಧನಸಹಾಯ, ವಿದ್ಯುತ್ ಸಂಪರ್ಕ ನೀಡುವುದಾಗಿ ಸಚಿವರು ಭರವಸೆ ನೀಡಿದರು.

ಎಣ್ಮಕಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂರಡ್ಕ ಖಂಡಿಗೆ ನಿವಾಸಿ ಸಂಧ್ಯಾ ಸರಸ್ವತಿ ಹಾಗೂ ಕುಟುಂಬ ಶನಿವಾರ ಮಂಗಲ್ಪಾಡಿಯಲ್ಲಿ ನಡೆದ ತಾಲೂಕುಮಟ್ಟದ ಅದಾಲತ್‌ಗೆ ಸಮಸ್ಯೆಗಳೊಂದಿಗೆ ಆಗಮಿಸಿದ್ದರು. ಪರಿಶಿಷ್ಟ ವರ್ಗಕ್ಕೆ ಸೇರಿದ ಸಂಧ್ಯಾ ಅವರ ಏಳು ವಯಸ್ಸಿನ ಪುತ್ರಿ ತಲಸ್ಸೇಮಿಯ ರೋಗ ಬಾಧಿತಳಾಗಿದ್ದಾಳೆ. ಮಗಳ ಚಿಕಿತ್ಸೆಗಾಗಿ ದೊಡ್ಡ ಮೊತ್ತದ ಅಗತ್ಯವಿದೆ. ತಿಂಗಳಿಗೆ ನಾಲ್ಕು ಬಾರಿ ಪುತ್ರಿಗೆ ರಕ್ತ ಬದಲಾವಣೆ ವಾಡುವ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ಪತಿಗೆ ಒಂದು ತಿಂಗಳಿನಲ್ಲಿ ಎಂಟು ದಿನ ವಾತ್ರ ಉದ್ಯೋಗ ನಿರ್ವಹಿಸಲು ಸಾಧ್ಯವಾಗುವ ಪರಿಸ್ಥಿತಿ ಇದೆ. ಕುಟುಂಬಕ್ಕೆ ಬೇರೆ ಯಾವುದೇ ರೀತಿಯ ಆದಾಯ ವಾರ್ಗಗಳೂ ಇಲ್ಲದೆ ಕುಟುಂಬ ಪರಿತಪಿಸುವಂತಾಗಿದೆ ಎಂದು ತಿಳಿಸಿದರು.

ಸಂಧ್ಯಾ ನೋವನ್ನು ಸಚಿವರಿಗೆ ಅರ್ಥೈಸಲು ಭಾಷೆಯ ಸಮಸ್ಯೆ ಎದುರಾದ ಹಿನ್ನೆಲೆ ಎಣ್ಮಕಜೆ ಪಂಚಾಯಿತಿ ಸದಸ್ಯೆ ಸೌದಾಬಿ ಹನೀಫ್ ಸಚಿವರಿಗೆ ಮನವರಿಕೆ ವಾಡಿದರು.

ಬಗೆಹರಿದ ಮನೆ ಸಮಸ್ಯೆ: ಲೈಫ್ ಭವನ ಯೋಜನೆಯ ಭಾಗವಾಗಿ ಮೂರು ಲಕ್ಷ ರೂ. ಲಭಿಸಿದ್ದರೂ ಮನೆ ನಿರ್ಮಿಸಲು ಸಾಧ್ಯವಾಗದ ಸಮಸ್ಯೆಯೂ ಅದಾಲತಿನಲ್ಲಿ ಕೊನೆಗೂ ಪರಿಹಾರ ಕಂಡುಕೊಂಡಿತು. ಸದ್ಯಕ್ಕೆ ಈ ಕುಟುಂಬ ಎಣ್ಮಕಜೆಯಲ್ಲಿನ ಸರ್ಕಾರಿ ಭೂಮಿಯ ಜನವಸತಿ ಇಲ್ಲದ ಮನೆಯಲ್ಲಿ ತಾತ್ಕಾಲಿಕವಾಗಿ ನೆಲೆಸಿದೆ. ಈ ಮನೆಗೆ ಕಟ್ಟಡ ಸಂಖ್ಯೆ ಲಭಿಸಿಲ್ಲ. ವಿದ್ಯುತ್ ಸಂಪರ್ಕವೂ ಇಲ್ಲ. ಈಗ ಪುತ್ರಿಯ ಚಿಕಿತ್ಸೆಗಾಗಿ ಕರ್ನಾಟಕವನ್ನು ಅವಲಂಬಿಸಿದ್ದಾರೆ.

ವಿಷಯವನ್ನು ಪರಿಶೀಲಿಸಿದ ನಂತರ ಆದಷ್ಟು ಶೀಘ್ರ ಈ ಕುಟುಂಬಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಕೆಎಸ್‌ಇಬಿ ಕಾರ್ಯಪಾಲಕ ಇಂಜಿನಿಯರ್‌ಗೆ ಸಚಿವರು ಸೂಚಿಸಿದರು.