ಜಿಲ್ಲೆ

ಕಾಸರಗೋಡಿಗರಿಗೆ ದ.ಕ. ಪಾಸ್ ಇಂದಿನಿಂದ

Dakshina Kannada

ಮಂಗಳೂರು: ಉದ್ಯೋಗ ನಿಮಿತ್ತ ಸಂಚರಿಸಲು ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಿರುವ ಕಾಸರಗೋಡು ಜಿಲ್ಲೆಯ ಜನರಿಗೆ ಪಾಸ್ ಒದಗಿಸುವಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಸತತ ಎರಡನೇ ದಿನ ಗುರುವಾರ ಕೂಡ ವಿಫಲವಾಯಿತು. ಆದರೆ, ಶುಕ್ರವಾರದಿಂದ ಪಾಸ್‌ಗೆ ಅನುಮೋದನೆ ನೀಡಲಾಗುವುದು ಎಂದು ಮಂಗಳೂರು ಉಪವಿಭಾಗಾಧಿಕಾರಿ ಮದನ್‌ಮೋಹನ್ ತಿಳಿಸಿದ್ದಾರೆ.

ಬುಧವಾರ ಪಾಸ್ ಒದಗಿಸುವ ಕುರಿತು ದ.ಕ. ಜಿಲ್ಲಾಡಳಿತ ಪ್ರಕಟಿಸಿತ್ತು. ಆದರೆ ವೆಬ್‌ಸೈಟ್ https://bit.ly/dkdpermit ಮಧ್ಯರಾತ್ರಿ ತನಕವೂ ಅರ್ಜಿ ಸ್ವೀಕಾರಕ್ಕೆ ಸಿದ್ಧಗೊಂಡಿರಲಿಲ್ಲ. ಬುಧವಾರ ಮಧ್ಯರಾತ್ರಿ ಬಳಿಕ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡ ಅರ್ಜಿ ನಮೂನೆಯಲ್ಲಿ ಗುರುವಾರ ಕಾಸರಗೋಡು ಜಿಲ್ಲೆಯ 1,088 ಮಂದಿ ಪಾಸ್ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅವರಿಗೆ ಸಾಯಂಕಾಲ ತನಕವೂ ಪಾಸ್ ದೊರೆತಿಲ್ಲ. ತಾಂತ್ರಿಕ ಕಾರಣದಿಂದ ಪಾಸ್ ಅನುಮೋದನೆ ವ್ಯವಸ್ಥೆ ವಿಳಂಬವಾಗಿದೆ.

ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಅರ್ಜಿ ಸಲ್ಲಿಸಿದ 840 ಜನರಿಗೆ ಕಾಸರಗೋಡು ಜಿಲ್ಲಾಡಳಿತ ಪಾಸ್ ಅನುಮೋದಿಸಿದೆ ಎಂದು ಕಾಸರಗೋಡು ವಾರ್ತಾಧಿಕಾರಿ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ 17 ಜನರು ಪಾಸ್ ಬಳಸಿ ಕಾಸರಗೋಡು ಜಿಲ್ಲೆಗೆ ಆಗಮಿಸಿ ವಾಪಸಾಗಿದ್ದಾರೆ ಎಂದು ಮಂಜೇಶ್ವರ ತಹಸೀಲ್ದಾರ್ ತಿಳಿಸಿದ್ದಾರೆ.

ಕಾಸರಗೋಡಿಗೆ ಹೋಗಲು ಅಲ್ಲಿನ ವೆಬ್‌ಸೈಟಲ್ಲೇ ಅರ್ಜಿ ಹಾಕಿ ಮಂಗಳೂರಿನಿಂದ ಕಾಸರಗೋಡಿಗೆ ಹೋಗಬಯಸುವವರು ದ.ಕ ಜಿಲ್ಲಾಡಳಿತ ನೀಡಿರುವ ವೆಬ್‌ಲಿಂಕ್‌ನಲ್ಲಿ ಅರ್ಜಿ ಹಾಕಿದ್ದಾರೆ. ಒಟ್ಟು ಬಂದಿರುವ ಅರ್ಜಿಯಲ್ಲಿ 700ರಷ್ಟು ಅಂತಹ ಅರ್ಜಿಗಳೇ ಇವೆ. ಕಾಸರಗೋಡಿಗೆ ಹೋಗುವವರು https://covid19jagratha.kerala.nic.in/ ಲಿಂಕ್‌ನಲ್ಲೇ ಅರ್ಜಿ ಸಲ್ಲಿಸಬೇಕು ಎಂದು ಮಂಗಳೂರು ಉಪವಿಭಾಗಾಧಿಕಾರಿ ಮದನ್‌ಮೋಹನ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಪ್ರಾರಂಭಿಕ ಹಂತದಲ್ಲಿ ವೈದ್ಯರು, ವೃತ್ತಿಪರರಿಗೆ ಮಾತ್ರ ಆದ್ಯತೆ ನೀಡುತ್ತೇವೆ. ಕೇವಲ ಸುತ್ತಾಡಬಯಸುವವರು ಅರ್ಜಿಯಲ್ಲಿ ವಿಸಿಟಿಂಗ್ ಕಾರ್ಡ್ ಹಾಕಿದ್ದಾರೆ ಅಂತಹವರಿಗೆ ಕೊಡುವುದಿಲ್ಲ. ಪಾಸ್‌ನಲ್ಲಿ ವ್ಯಕ್ತಿಯ ಫೊಟೊ ಹಾಗೂ ಬಾರ್‌ಕೋಡ್ ಇರುತ್ತದೆ, ತಲಪಾಡಿಯಲ್ಲಿ ಬರುವಾಗ ಮತ್ತು ಹೋಗುವಾಗ ಅದನ್ನು ತೋರಿಸಿ ಸ್ಕಾೃನ್ ಮಾಡಿಸಿಕೊಳ್ಳಬೇಕು, ಅದರಿಂದ ಆಗಮನ ನಿರ್ಗಮನ ಎರಡೂ ದಾಖಲಾಗುತ್ತದೆ, ಒಂದು ವೇಳೆ ತಪ್ಪಿದರೆ ಅಂತಹವರ ಮೇಲೆ ಕ್ರಮ ಜರಗಿಸಲಾಗುವುದು. - ಮದನ್ ಮೋಹನ್, ಮಂಗಳೂರು ಎಸಿ