ಉಡುಪಿ: ಕನ್ನಡದಲ್ಲಿ ಹಲವು ಲೇಖಕರು ಅತ್ಯುತ್ತಮ ಕಥೆ ಬರೆದು ನಾಡಿನ ಬೇರೆ ಬೇರೆ ಭಾಗಗಳಿಗೆ ಭಾಷಾಂತರಗೊಳಿಸಿ ಕನ್ನಡಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಮಾಸ್ತಿ, ಶಿವರಾಮ ಕಾರಂತ, ಲಂಕೇಶ್ , ಅನಂತಮೂರ್ತಿ, ವೈದೇಹಿ ಇಂತಹವರ ಕಥೆಗಳನ್ನು ವಿದ್ಯಾರ್ಥಿಗಳು ಓದಿದರೆ ಮುಂದೆ ಒಳ್ಳೆಯ ಕಥೆಗಾರರಾಗಲು ಸಾಧ್ಯ ಎಂದು ಪ್ರೊ.ಮುರಳೀಧರ ಉಪಾಧ್ಯ ಹೇಳಿದರು.
ಕನ್ನಡ ಸಾಹಿತ್ಯ ಸಂಘ, ಐಕ್ಯುಎಸಿ ಮತ್ತು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ಆಶ್ರಯದಲ್ಲಿ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಜಿಲ್ಲೆಯ ಪದವಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಗುರುವಾರ ಏರ್ಪಡಿಸಿದ್ದ ಕಥಾ ಕಮ್ಮಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
- ವಿವಿಧ ಗೋಷ್ಠಿ:
ಹಿರಿಯ ಕಥೆಗಾರ ಡಾ.ಬಿ. ಜನಾರ್ದನ ಭಟ್ ಅವರು "ಕನ್ನಡದ ಸಣ್ಣ ಕತೆಗಳ ಚಾರಿತ್ರಿಕ ನೋಟ' ಎಂಬ ವಿಷಯ ಕುರಿತು ಮಾಹಿತಿ ನೀಡಿದರು. ಹಿರಿಯ ವಿಮರ್ಶಕ ಬೆಳಗೋಡು ರಮೇಶ್ ಭಟ್, "ಕಥೆಗಳ ಪರಿಕರಗಳು' ಎಂಬ ವಿಷಯ ಕುರಿತು ಹಾಗೂ ಹಿರಿಯ ಲೇಖಕ ಟಿಎಎನ್ ಖಂಡಿಗೆ, "ಕಥೆ ಕಟ್ಟುವ ವಿಧಾನ' ಕುರಿತು ವಿದ್ಯಾಥಿಗಳಿಗೆ ಮಾಹಿತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷಿ$್ಮನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿದರು. ಜಿಲ್ಲಾ ಕಸಾಪ ಸಹ ಕಾರ್ಯದರ್ಶಿ ಮೋಹನ್ ಉಡುಪ ಹಂದಾಡಿ, ಎಂಜಿಎಂ ಕಾಲೇಜು ಐಕ್ಯುಎಸಿ ಮುಖ್ಯಸ್ಥೆ ಪ್ರೊ. ಶೈಲಜಾ, ಕಸಾಪ ಹೆಬ್ರಿ ತಾಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ್ ಭಂಡಾರಿ ಉಪಸ್ಥಿತರಿದ್ದರು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪುತ್ತಿ ವಸಂತ್ಕುಮಾರ್ ಸ್ವಾಗತಿಸಿದರು. ಉಡುಪಿ ತಾಲೂಕು ಕಸಾಪ ಕಾರ್ಯದರ್ಶಿ ಜನಾರ್ದನ ಕೊಡವೂರು ನಿರೂಪಿಸಿದರು. ಕಸಾಪ ತಾಲೂಕು ಘಟಕಾಧ್ಯಕ್ಷ ರವಿರಾಜ್ ಎಚ್.ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಘವೇಂದ್ರ ಪ್ರಭು ಕರ್ವಾಲು ವಂದಿಸಿದರು.