ಜಿಲ್ಲೆ

ದೇಶವನ್ನು ಪ್ರಗತಿಪಥದತ್ತ ಕೊಂಡೊಯ್ದವರು ಸರ್. ಎಂ. ವಿ.

ಪಂಕಜ ಕೆ.ಎಂ.

ಬೆಂಗಳೂರು : ಸಾಹಿತ್ಯ,ಸಾಂಸ್ಕೃತಿ, ಪರಿಸರದಲ್ಲಿ ಸಮೃದ್ಧಿಯಿಂದ ಕೂಡಿರುವ ದೇಶವನ್ನು ತಮ್ಮ ಕೊಡುಗೆಗಳ ಮೂಲಕ ಪ್ರಗತಿಪಥದತ್ತ ಕೊಂಡೊಯ್ದವರು ಸರ್.ಎಂ. ವಿಶ್ವೇಶ್ವರಯ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಸ್ಮರಿಸಿದರು.

ಪರಿಷತ್ತಿನ ಆವರಣದಲ್ಲಿರುವ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಸರ್. ಎಂ. ವಿಶ್ವೇಶ್ವರಯ್ಯ ರವರ ಜನ್ಮ ದಿನಾಚರಣೆ ಹಾಗೂ ಶ್ರೀ ಪಾಂಡಪ್ಪ ಲಕ್ಷ್ಮಣ ಹೂಗಾರ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿಶ್ವೇಶ್ವರಯ್ಯನವರು ಕೇವಲ ಇಂಜಿನಿಯರ್ ಮಾತ್ರವಲ್ಲದೆ ಮಹಾನ್ ವಿಜ್ಞಾನಿಗಳು, ದೂರದೃಷ್ಟಿಯ ತಂತ್ರಜ್ಞರು ಆಗಿದ್ದರು. ದೇಶಸೇವೆಯೇ ತಮ್ಮ ಜೀವನದ ಧ್ಯೇಯವಾಗಿಸಿಕೊಂಡು ಬದುಕಿದವರು ಎಂದು ಅವರ ಕೊಡುಗೆಗಳನ್ನು ಸ್ಮರಿಸಿದರು.

ಕಸಾಪ ಮಾಜಿ ಅಧ್ಯಕ್ಷ ಡಾ. ಮನು ಬಳಿಗಾರ್ ಮಾತನಾಡಿ, ದಕ್ಷತೆ ಹಾಗೂ ಪ್ರಾಮಾಣಿಕ ಬದುಕಿನ ಜೊತೆಗೆ ಕರ್ತವ್ಯದಕ್ಷತೆ ತೊರಿದ ಸರ್. ಎಂ. ವಿ ಅವರಂತೆ ಬಾಳಿ ಬದುಕಿದವರು ಪಾಂಡಪ್ಪ ಹುಗಾರ ಅವರು. ಶಿಕ್ಷಕರಾಗಿ ರೋಗಗ್ರಸ್ಥ ದೇಶವನ್ನು ಸುಧಾರಣೆ ಮಾಡುವಲ್ಲಿ ವಚನ ಸಾಹಿತ್ಯ ಯಾವ ರೀತಿಯಲ್ಲಿ ಕೆಲಸ ಮಾಡಿದೆ ಅನ್ನುವುದನ್ನು ತೋರಿಸಿಕೊಟ್ಟವರು ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ 2021 ನೆಯ ಸಾಲಿನ ಹಾಗೂ 2022 ನೆಯ ಸಾಲಿನ ಶ್ರೀ ಪಾಂಡಪ್ಪ ಲಕ್ಷ್ಮಣ ಹೂಗಾರ ದತ್ತಿ ಪ್ರಶಸ್ತಿಯನ್ನು ಕ್ರಮವಾಗಿ ಬೆಂಗಳೂರಿನ ಸಂಧ್ಯಾ ದೀಪ ಟ್ರಸ್ಟ್ (ರಿ) ಹಾಗೂ ಧಾರವಾಡ. ಲೇಖಕರು, ಪ್ರಸಾರ ತಜ್ಞ ಡಾ. ಬಸವರಾಜ ಸಾದರ ಅವರಿಗೆ ಪ್ರದಾನ ಮಾಡಲಾಯಿತು.

ಬೆಂಗಳೂರು ದಕ್ಷಿಣ ಪಿ.ಡಬ್ಲೂ.ಡಿಯ ಮುಖ್ಯ ಅಭಿಯಂತರ ಕೆ. ದುರ್ಗಪ್ಪ, ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿ ಕಾಲೇಜು ಪ್ರಾಂಶುಪಾಲ ಟಿ.ಎಸ್. ಸದಾಶಿವಮೂರ್ತಿ, ರಂಗಭೂಮಿ ಕಲಾವಿದರಾದ ಶ್ರೀಪತಿ ಮಂಜನಬೈಲು ಇತರರು ಇದ್ದರು.