ಮಂಡ್ಯ: ಜಿಲ್ಲೆಯಲ್ಲಿ ಜೂ.7 ರಿಂದ 9ರವರೆಗೆ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುವುದು. ಈ ಸಂಬಂಧ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯ ಬಳಿಕ ಮಾತನಾಡಿದ ಅವರು, ಸಮ್ಮೇಳನ ಕುರಿತು ಫೆ.1ರಂದು ಬೆಂಗಳೂರಿನಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರು, ನಾನು ಹಾಗೂ ಜಿಲ್ಲೆಯ ಎಲ್ಲ ಶಾಸಕರು, ಕೇಂದ್ರ ಕಸಾಪ ಅಧ್ಯಕ್ಷರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಫೆಬ್ರವರಿ ಕೊನೇ ಅಥವಾ ಮಾರ್ಚ್‌ನಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗುವ ಸಾಧ್ಯತೆಗಳಿದ್ದು, ಈ ಹಿನ್ನೆಲೆಯಲ್ಲಿ ಜೂನ್ ತಿಂಗಳಲ್ಲಿ ಸಮ್ಮೇಳನ ನಡೆಸಲಾಗುವುದು ಎಂದು ವಿವರಿಸಿದರು.
ಜಿಲ್ಲೆಯಲ್ಲಿ 1974 ಹಾಗೂ 1994ರಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗಿದೆ. ಬರೋಬರಿ 30 ವರ್ಷದ ಬಳಿಕ ಮೂರನೇ ಬಾರಿಗೆ ಜಿಲ್ಲೆಯಲ್ಲಿ ಸಮ್ಮೇಳನ ನಡೆಸಲು ಅವಕಾಶ ಸಿಕ್ಕಿದೆ. ಇದನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಗುವುದು. ಸಮ್ಮೇಳನ ಸ್ಥಳ ಇನ್ನೂ ನಿಗಧಿಯಾಗಿಲ್ಲ. ಆರ್‌ಎಪಿಸಿಎಂಎಸ್ ಆವರಣ, ಕೆರಗೋಡು ಅಥವಾ ಚಿಕ್ಕಮಂಡ್ಯ ಇಲ್ಲವೇ ಮಾಂಡವ್ಯ ಕಾಲೇಜು ಬಳಿ ಜಾಗ ಗುರುತಿಸಲಾಗಿದೆ. ಎಲ್ಲವನ್ನೂ ಪರಿಶೀಲನೆ ನಡೆಸಿ ಅಂತಿಮಗೊಳಿಸಲಾಗುವುದು ಎಂದು ಹೇಳಿದರು.
ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಸಲು ಕೇಂದ್ರ ಸಾಹಿತ್ಯ ಪರಿಷತ್‌ನ ಸಲಹೆಗಳೊಂದಿಗೆ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ವಿವಿಧ ಸಮಿತಿ ರಚಿಸಲಾಗುವುದು. ಸಮ್ಮೇಳನ ಯಶಸ್ವಿಯಾಗಿ ನಡೆಸಲು ಎಲ್ಲರನ್ನೂ ಒಳಗೊಂಡಂತೆ ಸುಮಾರು 25 ಸಮಿತಿಗಳನ್ನು ರಚಿಸಲು ತೀರ್ಮಾನಿಸಲಾಗಿದೆ. ಕಳೆದ ಸಮ್ಮೇಳನಕ್ಕೆ ಸುಮಾರು 25 ಕೋಟಿ ರೂ ವೆಚ್ಚವಾಗಿತ್ತು. ಈಗ ಇನ್ನೂ ಐದು ಕೋಟಿ ರೂ ಹೆಚ್ಚುವರಿ ಸೇರಿ 30 ಕೋಟಿ ರೂ ವೆಚ್ಚವಾಗಬಹುದೆಂದು ಕಸಾಪ ಅಂದಾಜು ಮಾಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೂ ಮನವರಿಕೆ ಮಾಡಿಕೊಟ್ಟಿದ್ದು, ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಸಮ್ಮೇಳನಕ್ಕೆ ಸ್ವಾಗತ ಸಮಿತಿ, ಸಮನ್ವಯ ಸಮಿತಿ, ಹಣಕಾಸು ಮತ್ತು ಲೆಕ್ಕ ಪರಿಶೋಧನಾ ಸಮಿತಿ, ವೇದಿಕೆ ನಿರ್ಮಾಣ, ಆಹಾರ ಮತ್ತು ಮೆರವಣಿಗೆ, ವಸತಿ, ಆರೋಗ್ಯ ಮತ್ತು ನೈರ್ಮಲ್ಯ, ಸಾಂಸ್ಕೃತಿಕ ಮತ್ತು ಸಾರಿಗೆ, ನಗರದ ಅಲಂಕಾರ, ಪುಸ್ತಕ ಬಿಡುಗಡೆ, ಪ್ರಚಾರ, ಆಮಂತ್ರ ಪತ್ರಿಕೆ, ಸ್ಮರಣಿಕೆ, ಮಾಧ್ಯಮ ಮತ್ತು ಶಿಷ್ಟಾಚಾರ ಹಾಗೂ ಇತರೆ ಸಮಿತಿಗಳನ್ನು ರಚಿಸಲಾಗುವುದು. ಸಮ್ಮೇಳನದಲ್ಲಿ ಕವಿಗೋಷ್ಠಿ, ಉಪನ್ಯಾಸ, ಪುಸ್ತಕ ಮಳಿಗೆ ಆಯೋಜಿಸಲು ಹಾಗೂ ಸಮ್ಮೇಳನಕ್ಕೆ ಪ್ರತಿನಿತ್ಯ ಸುಮಾರು 3 ರಿಂದ 4 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಅವರಿಗೆ ವಸತಿ, ಊಟದ ವ್ಯವಸ್ಥೆಗೆ ಆದ್ಯತೆ ನೀಡಲಾಗುವುದು. ಕಳೆದ ಬಾರಿ ಸಮ್ಮೇಳನಕ್ಕೆ ಬಿಡುಗಡೆಯಾದ ಅನುದಾನದಲ್ಲಿ ಉಳಿದ ಹಣದಲ್ಲಿ ಜಿಲ್ಲಾ ಕಸಾಪ ಭವನ ನಿರ್ಮಿಸಲಾಗಿದ್ದು, ಈ ಬಾರಿಯೂ ಉಳಿದ ಹಣದಲ್ಲಿ ಅಥವಾ ಹೆಚ್ಚಿನ ಅನುದಾನ ತಂದು 50ರ ಅಮೃತ ಭವನ ನಿರ್ಮಿಸಲು ಕ್ರಮ ವಹಿಸಲಾಗುವುದು ಎಂದು ವಿವರಿಸಿದರು.
ಶಾಸಕರಾದ ರವಿಕುಮಾರ್ ಗಣಿಗ, ರಮೇಶ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿ.ಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಇದ್ದರು.