ಶ್ರೀರಂಗಪಟ್ಟಣ: ಮಂಡ್ಯ ಜಿಲ್ಲೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕು, ಜಿಲ್ಲೆಯ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಬೇಕು. ಕನ್ನಡ ಶಾಲೆಗಳನ್ನು ಉನ್ನತೀಕರಿಸಬೇಕು ಎಂಬಿತ್ಯಾದಿ ಒಕ್ಕೊರಲ ನಿರ್ಣಯ ಕೈಗೊಳ್ಳುವುದರೊಂದಿಗೆ ಜಿಲ್ಲಾ 19ನೇ ಸಾಹಿತ್ಯ ಸಮ್ಮೇಳನ ಮುಕ್ತಾಯಗೊಂಡಿತು.
ಆರಂಭದಿಂದಲೂ ಹಲವು ಅವಾಂತರಗಳಲ್ಲೇ ಸಾಗಿಬಂದ ಎರಡು ದಿನಗಳ ಸಮ್ಮೇಳನ ಸಾಹಿತ್ಯಾಸಕ್ತರನ್ನು ತಲುಪುವಲ್ಲಿ ಎಡವಿದ್ದೇ ಹೆಚ್ಚು. ನಿಗದಿತ ಅತಿಥಿಗಳು ಸಮಾರೋಪ ಸಮಾರಂಭಕ್ಕೆ ಬಾರದ ಕಾರಣ ಇದ್ದವರನ್ನೇ ಬಳಸಿಕೊಂಡು ವೇದಿಕೆ ಕಾರ್ಯಕ್ರಮಕ್ಕೆ ತೆರೆ ಎಳೆಯಲು ಕಸಾಪ ಪದಾಧಿಕಾರಿಗಳು ಸರ್ಕಸ್ ಮಾಡಬೇಕಾಯಿತು.
ಧನ್ಯತೆ ಅರ್ಪಿಸಿದ ಅಧ್ಯಕ್ಷರು: ಕನ್ನಡ ಸಾಹಿತ್ಯದ ಬಗ್ಗೆ ಹೆಚ್ಚು ತಿಳಿಯದ ನನಗೆ ಮಹತ್ವದ ಸ್ಥಾನವನ್ನು ಕಸಾಪ ನೀಡಿದೆ. ಕಬ್ಬು ಕೃಷಿ ಬಗ್ಗೆ ಬರೆದ ಲೇಖನಗಳನ್ನೇ ಸಾಹಿತ್ಯವೆಂದು ಪರಿಗಣಿಸಿ ಅಧ್ಯಕ್ಷ ಪಟ್ಟ ನೀಡಿದ್ದಕ್ಕಾಗಿ ಧನ್ಯತೆ ಅರ್ಪಿಸುತ್ತೇನೆ ಎಂದು ತಳಿ ವಿಜ್ಞಾನಿ ಡಾ.ಎಸ್.ಎನ್.ಸ್ವಾಮಿಗೌಡ ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ಸಿ.ಕೆ.ರವಿಕುಮಾರ ಮಾತನಾಡಿ, ಸಾಹಿತ್ಯ ಸಮ್ಮೇಳನದ ಬಗ್ಗೆ ಇರಿಸಿಕೊಂಡಿದ್ದ ಸಾಕಷ್ಟು ನಿರೀಕ್ಷೆಗಳಲ್ಲಿ ಕೆಲವು ಈಡೇರಿಲ್ಲ. ಸಾಹಿತ್ಯ ಆಸಕ್ತರು ಹೆಚ್ಚನ ಸಂಖ್ಯೆಯಲ್ಲಿ ಆಗಮಿಸಲಿಲ್ಲ. ಆದರೂ ಶಾಸಕರು, ಕಸಾಪ ಪದಾಧಿಕಾರಿಗಳು, ಸರ್ಕಾರಿ ನೌಕರರು ನೀಡಿದ ಸಹಕಾರ ದೊಡ್ಡದು ಎಂದರು.
ಶಾಸಕ ರವೀಂದ್ರ ಶ್ರೀಕಂಠಯ್ಯ, ಮೈ.ವಿ.ವಿ. ಸಿಂಡಿಕೇಟ್ ಸದಸ್ಯ ಈ.ಸಿ.ನಿಂಗರಾಜೇಗೌಡ, ಜಿಪಂ ಮಾಜಿ ಅಧ್ಯಕ್ಷ ಲಿಂಗಣ್ಣ, ಜೆಡಿಎಸ್ ತಾಲೂಕು ಅಧ್ಯಕ್ಷ ಪೈ.ಮುಕುಂದ, ಕಸಾಪ ತಾಲೂಕು ಅಧ್ಯಕ್ಷ ಮಂಜುನಾಥ್, ಪುರಸಭೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಇತರರು ಉಪಸ್ಥಿತರಿದ್ದರು. ಸಮ್ಮೇಳನಕ್ಕೆ ಸಂಪೂರ್ಣ ಶ್ರಮಿಸಿದ ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ನೇತಾಜಿ ದಳದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.