ಬೆಂಗಳೂರು:ಕನ್ನಡ ಸಾಹಿತ್ಯಪರಿಷತ್ತು (ಕಸಾಪ) ಮುಂದಿನ ದಿನಗಳಲ್ಲಿ ನಾಡಿನ ಪ್ರಕಾಶಕರೊಡಗೂಡಿ ‘ಪುಸ್ತಕ ಉತ್ಸವ’ ನಡೆಸುವ ಯೋಜನೆ ಹೊಂದಿರುವುದಾಗಿ ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ ಹೇಳಿದ್ದಾರೆ.
ಕಸಾಪದ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಅತ್ಯುತ್ತಮ ಪ್ರಕಾಶನ ಸಂಸ್ಥೆಗೆ ನೀಡುವ ‘ಅಂಕಿತ ಪುಸ್ತಕ ಪುರಸ್ಕಾರ’ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಪುಸ್ತಕ ಉತ್ಸವದ ಮೂಲಕ ನಾಡಿನ ಜನರಿಗೆ ಉತ್ತಮ ಪುಸ್ತಕಗಳನ್ನು ಒದಗಿಸಿ, ಓದುವ ಅಭಿರುಚಿ ಹೆಚ್ಚಿಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು.
ರಾಜ್ಯದಲ್ಲಿ ವರ್ಷಕ್ಕೆ ಸರಾಸರಿ ಏಳು ಸಾವಿರ ಕನ್ನಡ ಪುಸ್ತಕಗಳು ಪ್ರಕಟವಾಗುತ್ತಿದ್ದು, ಒಂದು ಸಾವಿರ ಪುಸ್ತಕಗಳು ಮರು ಮುದ್ರಣವಾಗುತ್ತವೆ. ವರ್ಷಾಂತ್ಯದಲ್ಲಿ ಎರಡು ಸಾವಿರ ಪುಸ್ತಕಗಳು ಪ್ರಕಟಗೊಳ್ಳುತ್ತವೆ. ಇದು ಕನ್ನಡ ಸಾರಸ್ವತ ಲೋಕದಲ್ಲಿ ಉತ್ತಮ ಬೆಳವಣಿಗೆಯಾಗಿದ್ದು, ಈ ಪುಸ್ತಕಗಳನ್ನು ಜನರಿಗೆ ತಲುಪಿಸಲು ಪುಸ್ತಕ ಉತ್ಸವ ಉತ್ತಮ ವೇದಿಕೆಯಾಗಲಿದೆ ಎಂದರು.
ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ. ಸತೀಶಕುಮಾರ ಎಸ್. ಹೊಸಮನಿ ಮಾತನಾಡಿ, ಸಾಹಿತ್ಯದಿಂದ ಸಾಮಾಜಿಕ ಬದಲಾವಣೆ ಸಾಧ್ಯ. ರಾಜ್ಯಾದ್ಯಂತ ಇರುವ ಸಾಹಿತಿಗಳು, ಲೇಖಕರು ಪ್ರಕಾಶಕರು ಅಕ್ಷರ ಸಂಸ್ಕೃತಿಯನ್ನು ಉಳಿಸಿ ಬೆಳೆಸಿದ್ದಾರೆ. ಜತೆಗೆ ಶ್ರೀಸಾಮಾನ್ಯರೂ ವಿಶ್ವವಿದ್ಯಾಲಯ ಎಂದು ಗುರುತಿಸಿಕೊಂಡ ಗ್ರಂಥಾಲಯಗಳನ್ನು ಉಳಿಸಿದ್ದರು. ಅದೇ ರೀತಿ ಸಾಹಿತ್ಯ ಪರಂಪರೆ ಉಳಿಸಿ ಬೆಳೆಸುವಲ್ಲಿ ಪ್ರಕಾಶಕರ ಕೊಡುಗೆ ಮರೆಯುವಂತಿಲ್ಲ ಎಂದು ಹೇಳಿದರು.
ಅಂಕಿತ ಪುಸ್ತಕ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ ಮಾತನಾಡಿ, ಪುಸ್ತಕೋದ್ಯಮ ಸಾಕಷ್ಟು ಬೆಳೆದಿದೆ. ಹಿಂದೆ ಪುಸ್ತಕಕ್ಕೆ ಪುಸ್ತಕಗಳೇ ಪೈಪೋಟಿ ಕೊಡುತ್ತಿದ್ದವು. ಈಗ ಪುಸ್ತಕಗಳು ಸಾಮಾಜಿಕ ಜಾಲ ತಾಣಗಳು, ಓಟಿಟಿ, ಆನ್ಲೈನ್, ಇ-ಬುಕ್ ಇತ್ಯಾದಿಗಳ ಜೊತೆಗೆ ಸ್ಪರ್ಧೆಮಾಡಬೇಕಿದೆ. ಮತ್ತೆ ಪುಸ್ತಕ ಓದುವ ವೈಭವ ಮರುಕಳಿಸಬೇಕಿದೆ ಎಂದರು.
ಶಿವಮೊಗ್ಗ ಜಿಲ್ಲೆ ಸಾಗರದ ರವೀಂದ್ರ ಪುಸ್ತಕಾಲಯಕ್ಕೆ -2022ನೇ ಸಾಲಿನ ಹಾಗೂ ಬೆಂಗಳೂರಿನ ಛಂದ ಪುಸ್ತಕ ಸಂಸ್ಥೆಗೆ 2023 ನೇ ಸಾಲಿನ ‘ಅಂಕಿತ ಪುಸ್ತಕ ಪುರಸ್ಕಾರ’ ಪ್ರದಾನ ಮಾಡಲಾಯಿತು. ರವೀಂದ್ರ ಪುಸ್ತಕಾಲಯದ ಯಲ್ಲಪ್ಪ ಅಪ್ಪಾಜಿರಾವ್, ಛಂದ ಪುಸ್ತಕ ಸಂಸ್ಥೆಯ ವಸುಧೇಂದ್ರ, ಲೇಖಕ ಗಿರೀಶ್ರಾವ್ ಹತ್ವಾರ್ (ಜೋಗಿ), ಅಂಕಿತ ಪುಸ್ತಕ ಪ್ರಕಾಶನ ಸಂಸ್ಥೆಯ ಪ್ರಕಾಶ್ ಕಂಬತ್ತಳ್ಳಿ, ಕಸಾಪ ಗೌರವ ಕಾರ್ಯದರ್ಶಿ ನೇ. ಭ. ರಾಮಲಿಂಗ ಶೆಟ್ಟಿ, ಗೌರವ ಕೋಶಾಧ್ಯಕ್ಷ ಡಾ. ಬಿ.ಎಂ. ಪಟೇಲ್ ಪಾಂಡು, ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕ ಪ್ರೊ.ಎನ್.ಎಸ್. ಶ್ರೀಧರ್‌ಮೂರ್ತಿ ಮತ್ತಿತರರಿದ್ದರು.