ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪೂಕರವಾಗಿ ರಾಜ್ಯಸರ್ಕಾರ, ದೂರದರ್ಶನ ಮತ್ತು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನ.24ರಂದು ನಗರದ ಎಸ್.ಬಿ ಸಮುದಾಯ ಭವನದಲ್ಲಿ ‘ನಾವಾಡುವ ನುಡಿಯೇ ಕನ್ನಡ ನುಡಿ’ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಮೂಲಕ ಸ್ಥಳೀಯ ಪ್ರತಿಭೆ ಗುರುತಿಸಲು ಹಾಗೂ ದೂರದರ್ಶನದಲ್ಲಿ ಪ್ರಸಾರ ಮಾಡಲು ಗಾಯಕರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಸಾಹಿತ್ಯ ಸಮ್ಮೇಳನದ ಕಚೇರಿಯಲ್ಲಿ ಮಾತನಾಡಿದ ಅವರು, ಸಾಹಿತ್ಯ ಸಮ್ಮೇಳನದ ಪ್ರಚಾರಕ್ಕೆ ಪೂರಕವಾಗಿ ಕನ್ನಡ-ಕನ್ನಡಿಗ-ಕರ್ನಾಟಕದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಚಂದನದ ’ಮಧುರ ಮಧುರವೀ ಮಂಜುಳ ಗಾನ’ ಮಾದರಿಯಲ್ಲಿ ’ನಾವಾಡುವ ನುಡಿಯೇ ಕನ್ನಡ ನುಡಿ’ ಕಾರ್ಯಕ್ರಮ ನಡೆಸಲಾಗುತ್ತಿದೆ. ಆಸಕ್ತರು ಕನ್ನಡ ನಾಡು ನುಡಿಯ ಬಗೆಗಿನ ಚಿತ್ರಗೀತೆ ಮತ್ತು ಕನ್ನಡ ಕವಿಗಳ ಗೀತೆಗಳನ್ನು ಹಾಡಲು ಅವಕಾಶ ಕಲ್ಪಿಸಲಾಗುವುದು. ಇದರಲ್ಲಿ ಉದಯೋನ್ಮುಖ ಪ್ರತಿಭೆಗಳ ಜತೆಗೆ ಹಳೇ ಬೇರು ಹೊಸ ಚಿಗುರು ಮಾದರಿಯಲ್ಲಿ ಗಾಯಕರನ್ನು ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಗಾಯಕರ ಹಾಡುಗಳನ್ನು ಡಿ.1ರಂದು ನಗರದ ಅಂಬೇಡ್ಕರ್ ಭವನದಲ್ಲಿ ಚಿತ್ರೀಕರಣ ಮಾಡಿಕೊಂಡು ನಂತರ ದೂರದರ್ಶನ ಚಂದನದಲ್ಲಿ ಪ್ರಸಾರ ಮಾಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾಹಿತಿಗೆ ಮೊ.ಸಂ 9945914177 ಯನ್ನು ಸಂಪರ್ಕಿಸಬಹುದು ಎಂದು ವಿವರಿಸಿದರು.
ನೌಕರರ ದೇಣಿಗೆ ಸ್ವಾಗತ: ಸಮ್ಮೇಳನದಕ್ಕೆ ಜಿಲ್ಲೆಯ ಎಲ್ಲ ಇಲಾಖೆ ಅಧಿಕಾರಿ, ನೌಕರರು ತಮ್ಮ ಒಂದು ದಿನದ ವೇತನ ನೀಡಲು ಸಮ್ಮತಿಸಿದ್ದಾರೆ. ಈ ಮೂಲಕ ನೌಕರರು ತಮ್ಮ ಕನ್ನಡ ಪ್ರೇಮವನ್ನು ತೋರಿಸಿ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡಿದ್ದಾರೆ. ಈ ನಿರ್ಣಯ ಕೈಗೊಂಡಿರುವ ಸಂಘದ ಅಧ್ಯಕ್ಷ ಶಂಭುಗೌಡ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಕೆ.ನಾಗೇಶ್ ಹಾಗೂ ಜಿಲ್ಲೆಯ ಸರ್ಕಾರಿ ನೌಕರರನ್ನು ಅಭಿನಂದಿಸುವುದಾಗಿ ತಿಳಿಸಿದರು.
ಇನ್ನು ಕಳೆದ ಕೆಲ ದಿನಗಳಿಂದ ಸಾಹಿತ್ಯ ಸಮ್ಮೇಳನದ ಬಗ್ಗೆ ಅನಾವಶ್ಯಕವಾಗಿ ಗೊಂದಲದ ಹೇಳಿಕೆ ನೀಡುತ್ತಿದ್ದು, ಇದು ಸಾಮಾಜಿಕ ಜಾಲತಾಣಗಳ ಮೂಲಕ ರಾಜ್ಯಾದ್ಯಂತ ಪಸರಿಸಿದೆ. ಸಾಹಿತ್ಯ ಸಮ್ಮೇಳನದ ಮೇಲೆ ಕರಾಳ ಛಾಯೆ ಬೀರಲಿದೆ. ಈ ರೀತಿಯ ಹೇಳಿಕೆ ಕೊಡುವ ಬದಲು ಸಂಬಂಧಿಸಿದವರನ್ನು ಭೇಟಿಯಾಗಿ ಸ್ಪಷ್ಟನೆ ಪಡೆಯಬಹುದಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವಿದ್ದರೂ ಸಹ ಅದರ ಇತಿಮಿತಿಯನ್ನು ಮೀರಿ ಮಾತನಾಡುವುದರಿಂದ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಾಹಿತ್ಯ ಪರಿಷತ್ ವಿಭಿನ್ನ ಅಭಿಪ್ರಾಯ ಗೌರವಿಸುತ್ತದೆ. ಆದರೆ ಅದರಿಂದ ಋಣಾತ್ಮಕ ಪ್ರಭಾವ ಉಂಟಾಗುವುದು ಬೇಡ. ಈಗಾಗಲೇ ಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸಂದೇಶ ನೀಡಿ ರಾಜ್ಯ, ದೇಶ, ವಿದೇಶಗಳ ಜನರು ಸಮ್ಮೇಳನದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದ್ದಾರೆ. ಅದರ ಭಾಗವಾಗಿ ವಿದೇಶದಲ್ಲಿರುವ ಕನ್ನಡಿಗರನ್ನು ಸ್ವಾಗತಿಸಿದ್ದೇವೆ. ಎಲ್ಲ ಭಿನ್ನಾಭಿಪ್ರಾಯ ಮರೆತು ಮಂಡ್ಯದ ಖ್ಯಾತಿ, ಸಂಸ್ಕೃತಿ ಮತ್ತು ಸಮ್ಮೇಳನಕ್ಕೆ ಭಂಗ ತರುವ ಕೆಲಸ ಬೇಡ ಎಂದು ಮನವಿ ಮಾಡಿದರು.
ಕಸಾಪ ಕೋಶಾಧ್ಯಕ್ಷ ಪಟೇಲ್ ಪಾಂಡು, ಸಮ್ಮೇಳನದ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಡಾ.ಕೃಷ್ಣೇಗೌಡ ಹುಸ್ಕೂರು, ಹರ್ಷ ಪಣ್ಣೆದೊಡ್ಡಿ ಇದ್ದರು.