ಜಿಲ್ಲೆ

ಸಮ್ಮೇಳನ ಯಶಸ್ವಿಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿ: ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಷಿ ಹೇಳಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಆದ್ದರಿಂದ ಸರ್ಕಾರ, ಜಿಲ್ಲಾಡಳಿತ, ಕೇಂದ್ರ ಮತ್ತು ಜಿಲ್ಲಾ ಕಸಾಪ ಹೊಂದಾಣಿಕೆ, ಸಹಕಾರ, ಸಂಯೋಗ, ಸಹಭಾಗಿತ್ವ, ಸೌಹಾರ್ಧತೆ-ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಷಿ ಹೇಳಿದರು.

ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಮ್ಮೇಳನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಕಟ್ಟಿದ ಕನ್ನಡ ಸಾಹಿತ್ಯ ಪರಿಷತ್‌ಗೆ ಹೋಬಳಿ ಮತ್ತು ತಾಲೂಕು ಘಟಕದ ಪದಾಧಿಕಾರಿಗಳು ಅಡಿಪಾಯವಿದ್ದಂತೆ. ನಿಮ್ಮ ಶ್ರಮ ಸಮ್ಮೇಳನ ಯಶಸ್ಸಿಗೆ ಕಾರಣವಾಗುತ್ತದೆ. ಕನ್ನಡ ಸೇವೆಗಾಗಿ ಬಂದಿರುವ ನಿಮಗೆ ಕರ್ತವ್ಯ ಭಾರದ ಹಾರ ಹಾಕಿದ್ದೇವೆ. ಅದು ಗೌರವ ಮನ್ನಣೆಯ ಸಂಕೇತ. ಗೌರವದ ಹಿಂದೆ ಜವಾಬ್ದಾರಿಯೂ ಇದೆ ಎಂಬ ಮನೋಭಾವದಿಂದ ಕರ್ತವ್ಯ ನಿರ್ವಹಿಸಬೇಕು. ಸಮ್ಮೇಳನ ಜಿಲ್ಲೆಗೆ ತರುವಲ್ಲಿ ರವಿಕುಮಾರ ಚಾಮಲಾಪುರ ಅವರ ಉತ್ಸಾಹ ಚಟುವಟಿಕೆ ಕಾರ್ಯತತ್ಪರತೆ ಇದೆ. ಅವರನ್ನು ನೆನೆದು ಕೆಲಸ ಮಾಡೋಣ ಎಂದರು.

ಯಾವುದೇ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಸಂವಿಧಾನದ ಅಡಿ ಕರ್ತವ್ಯ ನಿರ್ವಹಿಸಬೇಕು. ಅದರಂತೆ ಕಸಾಪಗೂ ನೀತಿ ನಿಯಮವಿದೆ. ಅದರಂತೆ ಪದಾಧಿಕಾರಿಗಳ ನೇಮಕವಾಗುತ್ತಿದೆ. ಈಗ ತಿದ್ದುಪಡಿಯೊಂದಿಗೆ ಹಲವು ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಅದರಂತೆ ನೇಮಕವಾದವರು ಶ್ರದ್ಧೆಯಿಂದ ಕೆಲಸ ನಿರ್ವಹಿಸಿ. ಪರಿಷತ್ ಸ್ವಾಯತ್ತ ಸಂಸ್ಥೆಯಾದರೂ ಸಹ ಸರ್ಕಾರದ ಬೆಂಬಲ ಬೇಕು. ಯಾವುದೇ ರಾಜಕೀಯ ಹಿನ್ನೆಲೆಯಲ್ಲಿ ರಚಿತವಾಗಿದ್ದರೂ ಅದು ’ಕನ್ನಡ ಸರ್ಕಾರ’. ಅಲ್ಲಿರುವ ಸಚಿವರು, ಶಾಸಕರ ಬೆಂಬಲ ನಮಗೆ ಇದ್ದೇ ಇರುತ್ತದೆ. ಚುನಾವಣೆ ನಂತರ ಯಾವ ಭೇದ ಭಾವವು ಇಲ್ಲದೆ ಅವರು ಪ್ರಬುದ್ಧತೆಯಿಂದ ಕೆಲಸ ಮಾಡಬೇಕು ಎಂದರು.

ಸಮ್ಮೇಳನಕ್ಕೆ ಬರುವ ಲಕ್ಷಾಂತರ ಜನರಿಗೆ ರಕ್ಷಣೆ, ಆರೋಗ್ಯ, ಊಟ-ವಸತಿ, ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮ ನೀಡಬೇಕು. ಪರಿಷತ್ ಒಂದೇ ಏಕಾಂಗಿಯಾಗಿ ಮಾಡಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ನೀಡುತ್ತಿರುವ 30 ಕೋಟಿ ರೂ ರಾಜ್ಯದ ಏಳು ಕೋಟಿ ಕನ್ನಡಿಗರ ಹಣ. ಅದನ್ನು ಸದ್ವಿನಿಯೋಗ ಪಡಿಸಿಕೊಳ್ಳಬೇಕಾದ ಜವಾಬ್ದಾರಿ ಇದೆ. ನಾವೆಲ್ಲ ಜಾಗರೂಕತೆಯಿಂದ ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ ಅವರು, ಸಮ್ಮೇಳನ ನಡೆಯುವ ಮೂರು ದಿನಗಳ ಕಾಲ ಜಿಲ್ಲೆಯ ಪ್ರತಿ ಮನೆ ಮೇಲೆ ಕನ್ನಡದ ಧ್ವಜ ಹಾರಾಡಬೇಕು. ಸಮ್ಮೇಳನ ಮೇಲಿನ ಬಗ್ಗೆ ಜಗತ್ತಿನ ಎಲ್ಲರೂ ಹೆಮ್ಮೆಯಿಂದ ಮಾತನಾಡುವಂತಾಗಬೇಕು. ಮುಂದಿನ 5 ತಿಂಗಳ ಕಾಲ ಆ ನಿಟ್ಟಿನಲ್ಲಿ ನಾವೆಲ್ಲರೂ ಒಂದೇ ಕುಟುಂಬದ ರೀತಿ ಪ್ರೀತಿ-ವಿಶ್ವಾಸ ಉತ್ತಮ ಸಂಬಂಧಗಳನ್ನು ಇಟ್ಟುಕೊಂಡು ಕೆಲಸ ಮಾಡೋಣ. ಎಲ್ಲ ಪದಾಧಿಕಾರಿಗಳು ಇದನ್ನು ಸವಾಲಾಗಿ ಸ್ವೀಕರಿಸಿ ಹೆಚ್ಚು ಜನರು ಸಮ್ಮೇಳನಕ್ಕೆ ಆಗಮಿಸುವಂತೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಸಾಹಿತ್ಯ ಸಮ್ಮೇಳನದ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಮಂಡ್ಯ ಅಂದರೆ ಇಂಡಿಯಾ ಎಂದು ರಾಜಕೀಯದಲ್ಲಿ ಸಾಂಕೇತಿಕವಾಗಿ ಪ್ರಸಿದ್ಧಿಯಾಗಿದೆ. ಇಂತಹ ಮಂಡ್ಯಕ್ಕೆ ಒಂದು ಉತ್ತಮ ಅವಕಾಶ ಸಿಕ್ಕಿದೆ. ಇಡೀ ವಿಶ್ವಕ್ಕೆ 87 ನೇ ಸಾಹಿತ್ಯ ಸಮ್ಮೇಳನ ಸಾಕ್ಷಿಯಾಗುತ್ತದೆ. ಜಿಲ್ಲೆಯ ಹೆಸರು ಜಗತ್ತಿನಲ್ಲಿ ಜನಜನಿತವಾಗಲಿ, ಮಾದರಿಯಾಗಿ ಅಭೂತಪೂರ್ವ ಹಾಗೂ ಆದರ್ಶವಾಗಲಿ. ಹಬ್ಬದಲ್ಲಿ ಊರಿಗೆ ಊರೇ ಸಂಭ್ರಮಿಸುವಂತೆ ನಾವು ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾಗೋಣ ಎಂದರು.

ಕೇಂದ್ರ ಸಾಹಿತ್ಯ ಪರಿಷತ್ ಕಾರ್ಯದರ್ಶಿಗಳಾದ ಪದ್ಮಿನಿ ನಾಗರಾಜ್, ನೇ.ಭ.ರಾಮಲಿಂಗಶೆಟ್ಟಿ, ಕೋಶಾಧ್ಯಕ್ಷ ಪಟೇಲ್ ಪಾಂಡು, ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಡಾ.ಕೃಷ್ಣೇಗೌಡ ಹುಸ್ಕೂರು, ಹರ್ಷ ವಿ.ಪಣ್ಣೆದೊಡ್ಡಿ, ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ ಇತರರಿದ್ದರು.