ಜಿಲ್ಲೆ

ಅಜಿತ್ ಪವಾರ್ ಹೇಳಿಕೆ ಒಕ್ಕೂಟ ವ್ಯವಸ್ಥೆಗೆ ವಿರುದ್ಧ: ಕಸಾಪ

rameshapm

ಬೆಂಗಳೂರು: ಬೆಳಗಾವಿ, ಕಾರವಾರ ಹಾಗೂ ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಿದ್ದು ಎಂಬ ಅಲ್ಲಿನ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿಕೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಖಂಡಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ್, ಅಜಿತ್ ಪವಾರ್ ಅವರು ತಮ್ಮ ಹುದ್ದೆಯ ಘನತೆಯನ್ನು ಮರೆತು ಆಡಿರುವ ಈ ಪ್ರಚೋದನಕಾರಿ ಮಾತುಗಳು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತಹವು. ಇಂತಹ ರಾಜಕೀಯ ಪ್ರೇರಿತ ಮಾತುಗಳಿಗೆ ಕಡಿವಾಣ ಅಗತ್ಯ. ಹೊಣೆಗಾರಿಕೆಯ ಸ್ಥಾನದಲ್ಲಿರುವವರು ಹಗುರ ಮಾತುಗಳನ್ನಾಡಬಾರದು. ಕೆಲವು ವರ್ಷಗಳ ಹಿಂದೆ ಮಹಾರಾಷ್ಟ್ರದ ಗೃಹಸಚಿವ ಆರ್.ಆರ್. ಪಾಟೀಲ್ ಅವರು ಇಂತಹುದೇ ಉದ್ರೇಕಕಾರಿ ಮಾತು ಆಡಿದ್ದಕ್ಕೆ ಚುನಾವಣಾ ಆಯೋಗವೇ ಅವರನ್ನು ಎಚ್ಚರಿಸಿತ್ತು. ನಮ್ಮ ರಾಜ್ಯ ಸರ್ಕಾರ ಎಫ್‌ಐಆರ್ ದಾಖಲಿಸಿತ್ತು.

ಬೆಳಗಾವಿ ತನ್ನದೆಂದು ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ಹೂಡಿರುವ ದಾವೆ 16 ವರ್ಷಗಳಾದರೂ ಇನ್ನೂ ವಿಚಾರಣೆಗೆ ಬಂದಿಲ್ಲ. ಹತಾಶೆಗೊಂಡ ಮಹಾರಾಷ್ಟ್ರ ಸರ್ಕಾರ ದಾವೆಯ ಅರ್ಜಿಯನ್ನು ಪದೇಪದೇ ಬದಲಿಸುತ್ತಿದೆ. 1966ರಲ್ಲಿ ಗಡಿ ವಿಷಯ ಕುರಿತಂತೆ ನೀಡಲ್ಪಟ್ಟ ಮಹಾಜನ್ ವರದಿಯೇ ಅಂತಿಮ ಎಂದು ಎರಡೂ ರಾಜ್ಯಗಳು ಮುಂಚಿತವಾಗಿಯೇ ಒಪ್ಪಿಕೊಂಡಿದ್ದವು. ಇದನ್ನೂ ತಿಳಿದುಕೊಳ್ಳದೆ ಹುಯಿಲೆಬ್ಬಿಸುವುದು ಇವರ ಅಜ್ಞಾನವನ್ನು ತೋರಿಸುತ್ತದೆ.

ಕರ್ನಾಟಕ ರಾಜ್ಯ ಸರ್ಕಾರ ಗಡಿ ಉಸ್ತುವಾರಿ ಸಚಿವರನ್ನು ನೇಮಕಮಾಡಬೇಕು. ಗಡಿ ಅಭಿವೃದ್ಧಿ ಪ್ರಾಧಿಕಾರವನ್ನು ಸಚೇತನಗೊಳಿಸಬೇಕು ಹಾಗೂ ಸರ್ವೋಚ್ಚ ನ್ಯಾಯಾಲಯದಲ್ಲಿ ರಾಜ್ಯದ ಪರ ವಾದ ಮಂಡಿಸುವ ಕಾನೂನುತಜ್ಞರ ಜೊತೆ ಕೂಡಲೇ ಗಂಭೀರವಾಗಿ ಸಮಾಲೋಚಿಸಬೇಕೆಂದು ಆಗ್ರಹಿಸುತ್ತೇವೆ.