ಮಂಡ್ಯ: ಎಂಬತ್ತೇಳನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆರಂಭವಾಗುವ ಮೊದಲಿನಿಂದಲೂ ಕೆಲವರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ ಜೋಶಿ ವಿರುದ್ದ ಆರೋಪ ಮಾಡುತ್ತಿದ್ದಾರೆ. ಇನ್ನಾದರೂ ಇಂತಹ ಆರೋಪಕ್ಕೆ ತಾರ್ಕಿಕ ಅಂತ್ಯವಾಡಬೇಕಿದೆ ಎಂದು ಕಸಾಪ ಕಾರ್ಯಕಾರಿ ಸಮಿತಿ ಸದಸ್ಯ ಪ್ರೊ.ಎಚ್.ಎಸ್.ಮುದ್ದೇಗೌಡ ಒತ್ತಾಯಿಸಿದರು.
ಮಹೇಶ ಜೋಶಿ ಅವರು ಕಾನೂನಿನ ಅಡಿಯಲ್ಲಿ ಮಾಡುತ್ತಿರುವ ಕೆಲಸಗಳಿಗೆ ಮಂಡ್ಯದಿಂದ ಅಪಸ್ವರ ಹಾಡುವುದು ಸರಿಯಾದ ಕ್ರಮವಲ್ಲ. ಪರಿಷತ್ ಅಧ್ಯಕ್ಷರಾಗುವ ಮುನ್ನ ತಾವು ನೀಡಿದ ಮಾತಿಗೆ ಕಟಿಬದ್ಧರಾಗಿ ಜಿಲ್ಲೆಗೆ ಸಾಹಿತ್ಯ ಸಮ್ಮೇಳನವನ್ನು ತಂದು ತಮ್ಮ ಮಾತು ಉಳಿಸಿಕೊಂಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪರಿಷತ್‌ನ ಬೈಲಾ ತಿದ್ದುಪಡಿ ಹಂಪ ನಾಗರಾಜಯ್ಯ ಅವರ ಅಧ್ಯಕ್ಷತೆ ಸಮಯದಿಂದಲೂ ಮಾಡಲಾಗುತ್ತಿದೆ. ಅಂತೆಯೇ ಬೈಲಾ ತಿದ್ದುಪಡಿಗೆ 12 ಸದಸ್ಯರ ಸಮಿತಿ ರಚಿಸಿ ನಿರ್ಣಯ ಕೈಗೊಂಡಿದ್ದಾರೆ. ಪರಿಷತ್‌ನ ಸದಸ್ಯತ್ವ ಪಡೆಯಲು ಆನ್‌ಲೈನ್ ಮೂಲಕ ಸರಳೀಕರಣಗೊಳಿಸುವುದು, ಜಿಲ್ಲಾ ಘಟಕಗಳ ಪದಾಧಿಕಾರಿಗಳ ಆಯ್ಕೆ, ಅಶಿಸ್ತಿನ ವಿರುದ್ಧ ಕ್ರಮ ಕೈಗೊಂಡು ಅಮಾನತಿನಲ್ಲಿಡುವುದು ಸೇರಿದಂತೆ ಹಲವು ಅಂಶ ಹೊಂದಿದ್ದ ತಿದ್ದುಪಡಿಗೆ ಕಾರ್ಯಕಾರಿ ಸಮಿತಿಯ ಇಬ್ಬರು ಸದಸ್ಯರು ಹೊರತುಪಡಿಸಿ, ಬೇರೆಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.
ಸಮ್ಮೇಳನದ ವೇಳೆ ಡಾ.ಮೀರಾ ಶಿವಲಿಂಗಯ್ಯ ಅವರನ್ನು ಮುಂದಿನ ಆದೇಶದವರೆಗೆ ಸಂಚಾಲಕರನ್ನಾಗಿ ನೇಮಿಸಲಾಗಿತ್ತು. ಅದರಂತೆ ಯಾವಾಗ ಬೇಕಾದರೂ ಹುದ್ದೆಯಿಂದ ತೆರವುಗೊಳಿಸುವ ಅಧಿಕಾರ ಅಧ್ಯಕ್ಷರಿಗಿತ್ತು. ಅದನ್ನೇ ದೊಡ್ಡ ಸಮಸ್ಯೆಯನ್ನಾಗಿಸಿ ಅವರ ಬೆಂಬಲಿಗರು ಗಲಾಟೆಗೆ ಮುಂದಾದರು. ಕೆಲವು ಸಮಿತಿಗಳು ಸಮ್ಮೇಳನದ ಖರ್ಚಿನ ಸಂಪೂರ್ಣ ಲೆಕ್ಕ ನೀಡಿಲ್ಲ. ಸಮ್ಮೇಳನ ಬಗೆಗಿನ ಚರ್ಚೆ ಹಾದಿ ತಪ್ಪುತ್ತಿದ್ದು, ಅಧ್ಯಕ್ಷರೂ ಲೆಕ್ಕ ನೀಡಲು ಆರು ತಿಂಗಳ ಅವಧಿಯ ಅವಕಾಶವಿರುವುದರಿಂದ ನೀಡುತ್ತಾರೆ. ಬೆದರಿಕೆಯೊಡ್ಡಿದ ಕಾರಣ ಜೋಶಿ ಅವರು ಜಿಲ್ಲೆಗೆ ಆಗಮಿಸುತ್ತಿಲ್ಲ, ಅನಾರೋಗ್ಯದ ಕಾರಣ ಸಮ್ಮೇಳನದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ ಎಂದರು.
ಜಿಲ್ಲಾ ಕಸಾಪ ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಅಜೀವ ಸದಸ್ಯ ಧನಂಜಯ ದರಸಗುಪ್ಪೆ, ಜಿ.ವಿ.ನಾಗರಾಜು, ಕರವೇ ಗೌರವಾಧ್ಯಕ್ಷ ಶಂಕರೇಗೌಡ, ವೇಣು, ಸುಜಾತಾ ಕೃಷ್ಣ, ಶ್ರೀನಿವಾಸ್ ಇದ್ದರು.