ಜಿಲ್ಲೆ

ಹೋಬಳಿ ಹಂತದಲ್ಲಿ ಸಭೆಗೆ ಚಿಂತನೆ: ಸಮ್ಮೇಳನದ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ ಹೇಳಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಮಂಡ್ಯದಲ್ಲಿ ಡಿ.20ರಿಂದ 22ರವರೆಗೆ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂಘಟನೆಗೆ ಪೂರಕವಾಗಿ ತಾಲೂಕು ಮತ್ತು ಹೋಬಳಿ ಹಂತದಲ್ಲಿ ಸಭೆ ನಡೆಸುವ ಚಿಂತನೆ ಇದೆ ಎಂದು ಸಮ್ಮೇಳನದ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ ತಿಳಿಸಿದರು.

ನಗರದ ಬಂದೀಗೌಡ ಬಡಾವಣೆಯಲ್ಲಿರುವ ಜಿಲ್ಲಾ ಕಸಾಪ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಕಸಾಪ ಕಾರ್ಯಕಾರಿಣಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕು ಮತ್ತು ಹೋಬಳಿ ಮಟ್ಟದ ಸಭೆಗೆ ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ಆಗಮಿಸಿ ಸಲಹೆ ಸೂಚನೆ ನೀಡಲಿದ್ದಾರೆ. ಆದ್ದರಿಂದ ತಾಲೂಕು ಮತ್ತು ಹೋಬಳಿ ಘಟಕದ ಅಧ್ಯಕ್ಷರು ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿದರು.

30 ವರ್ಷದ ಬಳಿಕ ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ ನಡೆಸುವ ಅಪೂರ್ವವಾದ ಅವಕಾಶ ಸಿಕ್ಕಿದೆ. ಆದ್ದರಿಂದ ಸಮ್ಮೇಳನ ಯಶಸ್ವಿಗೊಳಿಸಲು ಎಲ್ಲರೂ ಸಮನ್ವಯತೆಯಿಂದ ಕೆಲಸ ಮಾಡೋಣ. ಪ್ರತಿ ಸಮಿತಿಯ ಸದಸ್ಯರು ಕಾರ್ಯದರ್ಶಿ ಜತೆ ಚರ್ಚಿಸಿ ಕ್ರಿಯಾ ಯೋಜನೆ ತಯಾರಿಸಲು ಸಹಕರಿಸಿ. ಸಮ್ಮೇಳನದವರೆಗೆ ತಾಲೂಕು ಘಟಕದಿಂದ ಸಣ್ಣ ಪುಟ್ಟ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುವಂತೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಡಾ.ಕೃಷ್ಣೇಗೌಡ ಹುಸ್ಕೂರು, ಹರ್ಷ ವಿ.ಪಣ್ಣೆದೊಡ್ಡಿ, ಜಿಲ್ಲಾ ಪದಾಧಿಕಾರಿಗಳಾದ ಧನಂಜಯ ದರಸಗುಪ್ಪೆ, ಹೊಳಲು ಶ್ರೀಧರ್, ಎಂ.ಸಿ.ಭಾಸ್ಕರ್, ಸಿ.ಎಂ.ಕ್ರಾಂತಿಸಿಂಹ, ಗಾಮನಹಳ್ಳಿ ಮಹದೇವಸ್ವಾಮಿ, ಡಾ.ಪ್ರಮೀಳಾ, ಅಂಜನಾ ಶ್ರೀಕಾಂತ್, ಎಲ್.ಕೃಷ್ಣ, ಬಸವೇಗೌಡ ಖರಡ್ಯ, ಬಿ.ಸಿ.ಉಮಾಶಂಕರ್, ಮಂಜುನಾಥ್ ಬಲ್ಲೇನಹಳ್ಳಿ, ಎಚ್.ಎಸ್.ಮಂಜುನಾಥ, ತಾಲೂಕು ಅಧ್ಯಕ್ಷರಾದ ಚಂದ್ರಲಿಂಗು, ಸುನೀಲ್‌ಕುಮಾರ್, ಚಂದ್ರಶೇಖರ್, ಎಂ.ಬಿ.ಕುಮಾರ್, ಎಲ್.ಚೇತನ್ ಕುಮಾರ್, ಪ್ರಕಾಶ್ ಮೇನಾಗರ, ನಗರ ಘಟಕದ ಅಧ್ಯಕ್ಷೆ ಸುಜಾತಾ ಕೃಷ್ಣ ಭಾಗವಹಿಸಿದ್ದರು.

ರಾಜ್ಯಸರ್ಕಾರ, ಜಿಲ್ಲಾಡಳಿತ ಮತ್ತು ಕನ್ನಡ ಸಾಹಿತ್ಯ ಪರಿಷತ್ ಸಹಕಾರದೊಂದಿಗೆ ನಡೆಯುತ್ತಿರುವ ಸಮ್ಮೇಳನದಲ್ಲಿ ಜಿಲ್ಲಾ ಪದಾಧಿಕಾರಿಗಳು ಮತ್ತು ತಾಲೂಕು ಅಧ್ಯಕ್ಷರು ಸಮಿತಿಯಲ್ಲಿ ಪ್ರಮುಖ ಸ್ಥಾನ ನೀಡಬೇಕೆಂಬುದು ಎಲ್ಲರ ಒಕ್ಕೊರಲ ಅಭಿಪ್ರಾಯವಾಗಿತ್ತು. ಈ ಸಂಬಂಧ ಸಚಿವರೊಂದಿಗೆ ಚರ್ಚಿಸಲು ನಿರ್ಧರಿಸಲಾಯಿತು. ಜಿಲ್ಲಾ ಕಸಾಪ ಸಂಚಾಲಕಿ ಆಗಿ ನೇಮಕಗೊಂಡ ಮೀರಾ ಶಿವಲಿಂಗಯ್ಯ ಅವರನ್ನು ಸಮಿತಿಯ ಪರವಾಗಿ ಅಭಿನಂದಿಸಲಾಯಿತು. ಸಮ್ಮೇಳನದ ಸವಿನೆನಪಿನಲ್ಲಿ ನಗರದ ಕೇಂದ್ರ ಭಾಗದಲ್ಲಿ ಜಿಲ್ಲಾ ಕಸಾಪ ಭವನ ನಿರ್ಮಾಣಕ್ಕೆ ಸ್ಥಳ ಒದಗಿಸುವಂತೆ ಜಿಲ್ಲಾಡಳಿತವನ್ನು ಕೋರಲು ತೀರ್ಮಾನಿಸಲಾಯಿತು.