ಜಿಲ್ಲೆ

ಡಾ. ಬಿ.ಎಸ್. ಶೈಲಜಾರಿಗೆ ಕಸಾಪ ದತ್ತಿ ಪುರಸ್ಕಾರ

ಪಂಕಜ ಕೆ.ಎಂ.

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ನೀಡುವ 2025ನೇ ಸಾಲಿನ ಟಿ. ಗಿರಿಜಾ ದತ್ತಿ ಪುರಸ್ಕಾರಕ್ಕೆ ವಿಜ್ಞಾನ ಬರಹಗಾರ್ತಿ ಹಾಗೂ ಜವಹರಲಾಲ್ ನೆಹರು ತಾರಾಲಯದ ನಿವೃತ್ತ ನಿರ್ದೇಶಕಿ ಡಾ. ಬಿ.ಎಸ್. ಶೈಲಜಾ ಆಯ್ಕೆಯಾಗಿದ್ದಾರೆ.

ಬರಹಗಾರ ಬ.ನ.ಸುಂದರರಾಯರ ಮಗಳು ಡಾ. ಬಿ.ಎಸ್. ಶೈಲಜಾ ಅವರು, ಭಾರತೀಯ ಭೌತ ವಿಜ್ಞಾನ ಸಂಸ್ಥೆಯಿಂದ ಡಾಕ್ಟರೇಟ್ ಪದವಿ ಪಡೆದು, ಜವಹರಲಾಲ್ ನೆಹರು ತಾರಾಲಯದಲ್ಲಿ ಹಲವು ಮಹತ್ವದ ಹುದ್ದೆಗಳನ್ನು ನಿರ್ವಹಿಸಿದವರು. ಕನ್ನಡದಲ್ಲಿ ವಿಜ್ಞಾನವನ್ನು, ಮುಖ್ಯವಾಗಿ ಖಭೌತ ವಿಜ್ಞಾನವನ್ನು ಜನಪ್ರಿಯಗೊಳಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ.

ಕನ್ನಡದಲ್ಲಿ ಆರು ನೂರು ಮತ್ತು ಇಂಗ್ಲಿಷ್ ಭಾಷೆಯಲ್ಲಿ ಇನ್ನೂರಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. 150 ಸಂಶೋಧನಾ ಪ್ರಬಂಧಗಳನ್ನು ಮಂಡಿಸಿ ಜಾಗತಿಕ ಗಮನ ಸೆಳೆದಿದ್ದಾರೆ. ಅನುವಾದಕರೂ ಆಗಿದ್ದು, ರುದ್ರಪ್ರಯಾಗದ ನರಭಕ್ಷಕ ಚಿರತೆ, ಗಲಿವರನ ಪ್ರವಾಸ ದಂತಹ ಮಹತ್ವದ ಕೃತಿಗಳನ್ನುಯ ಅನುವಾದಿಸಿದ್ದಾರೆ. ಖಗೋಳ ದರ್ಶನ ಎಂಬ ಬೃಹತ್ ಸಂಪುಟವನ್ನು ಕನ್ನಡಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

ಇವರ ಸಾಹಿತ್ಯ ಸೇವೆ ಪರಿಗಣಿಸಿ ದತ್ತಿ ದಾನಿಗಳ ಆಶಯದಂತೆ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಪರಿಷತ್ತು ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.