ಜಿಲ್ಲೆ

ನವೆಂಬರ್‌ನಲ್ಲಿ ಕಸಾಪ ಸಮ್ಮೇಳನ: ಕೇಂದ್ರ ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಷಿ ನೇತೃತ್ವದಲ್ಲಿ ಸಭೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಎಂಬತ್ತೇಳನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಾವಾಗ ಎನ್ನುವ ಸ್ಪಷ್ಟ ಮಾಹಿತಿ ಸಿಗದಿದ್ದರೂ ಮುಂದಿನ ವರ್ಷದ ನವೆಂಬರ್ ವೇಳೆಗೆ ಆಯೋಜನೆಗೊಳ್ಳುವ ಸಾಧ್ಯತೆ ಇದೆ.
ಸಮ್ಮೇಳನ ಆಯೋಜನೆ ಬಗ್ಗೆ ಚರ್ಚಿಸಲು ನಗರದ ರೈತ ಸಭಾಂಗಣದಲ್ಲಿ ಕೇಂದ್ರ ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಷಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿದ್ದ ಕನ್ನಡಪರ ಸಂಘಟನೆ ಪದಾಧಿಕಾರಿಗಳು, ಸಾಹಿತ್ಯಾಸಕ್ತರು, ಕಸಾಪ ಮಾಜಿ ಪದಾಧಿಕಾರಿಗಳು ಹಾಗೂ ಸಂಘಟನೆಗಳ ಮುಖಂಡರು ತಮ್ಮ ಅಭಿಪ್ರಾಯ ಮಂಡಿಸಿದರು.
ಈ ವರ್ಷದ ನವೆಂಬರ್‌ನಲ್ಲಿ ಸಮ್ಮೇಳನ ಆಯೋಜನೆಗೊಳ್ಳಬೇಕಿತ್ತು. ಆದರೆ ಬರಗಾಲ ಎದುರಾದ ಹಿನ್ನೆಲೆಯಲ್ಲಿ ಕಸಾಪದಿಂದಲೇ ಸಮ್ಮೇಳನವನ್ನು ಮುಂದೂಡಲಾಯಿತು. ಆದರೆ ಮುಂದೆ ಯಾವಾಗ ಎನ್ನುವ ಪ್ರಶ್ನೆ ಕೇಳಿಬಂದಿತ್ತು. ಬೆಳಗಾವಿ ಅಧಿವೇಶನದಲ್ಲಿಯೇ ಚರ್ಚೆ ನಡೆದಿತ್ತು. ಈ ನಡುವೆ ಕಸಾಪ ಜಿಲ್ಲಾಧ್ಯಕ್ಷ ಸಿ.ಕೆ.ರವಿಕುಮಾರ ಚಾಮಲಾಪುರ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವುದರಿಂದ ಸಮ್ಮೇಳನ ಬೇರೆ ಜಿಲ್ಲೆಗೆ ಸ್ಥಳಾಂತರವಾಗಲಿದೆ ಎನ್ನುವ ಮಾತು ಕೇಳಿಬಂದಿತ್ತು. ಈ ಎಲ್ಲ ಪ್ರಶ್ನೆಗೆ ಸಮ್ಮೇಳನದ ಪೂರ್ವಭಾವಿ ಸಭೆ ಉತ್ತರ ನೀಡಿದ್ದು, ಪ್ರಮುಖವಾಗಿ ಮಂಡ್ಯದಲ್ಲಿಯೇ ಸಮ್ಮೇಳನ ನಡೆಯುವುದು ಖಚಿತವಾಗಿದೆ.
ಕೆಲ ದಿನದ ಹಿಂದೆ ನಡೆದಿದ್ದ ಸಭೆಯಲ್ಲಿ 2024ರ ೆಬ್ರವರಿಯಲ್ಲಿ ಕಸಾಪ ಸಮ್ಮೇಳನ ಆಯೋಜನೆಗೊಳ್ಳಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಸಧ್ಯದ ಸ್ಥಿತಿಗತಿ ಗಮನಿಸಿದರೆ ಅದು ಅಸಾಧ್ಯ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಅಖಿಲ ಭಾರತ ಸಮ್ಮೇಳನವಾಗಿರುವುದರಿಂದ ಕನಿಷ್ಟ ಐದಾರೂ ತಿಂಗಳು ಸಿದ್ಧತೆ ಬೇಕಿದೆ. ಜತೆಗೆ ಅನುದಾನದ ಅವಶ್ಯಕತೆಯೂ ಇರುವುದರಿಂದ ಮುಂದಿನ ಮಳೆಗಾಲದವರೆಗೆ ಬರ ಎದುರಿಸಬೇಕಿರುವುದರಿಂದ ಅನುದಾನದ ಲಭ್ಯತೆ ಸಿಗುವುದು ಅನುಮಾನ. ಇದಲ್ಲದೆ ಲೋಕಸಭೆ, ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ, ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ, ಮಳೆಗಾಲ ಇರುವುದರಿಂದ ನವೆಂಬರ್‌ಗೆ ಸಮ್ಮೇಳನ ನಡೆಯಬಹುದೆನ್ನುವ ಮಾತುಗಳಿವೆ.
ಕಸಾಪ ಕೋಶಾಧ್ಯಕ್ಷ ಪಾಂಡು, ಗೌರವ ಕಾರ್ಯದರ್ಶಿಗಳಾದ ಪದ್ಮಿನಿ ನಾಗರಾಜ್, ರಾಮಲಿಂಗಶೆಟ್ಟಿ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಎಂ.ವಿ.ಧರಣೇಂದ್ರಯ್ಯ, ಪ್ರೊ.ಜಿ.ಟಿ.ವೀರಪ್ಪ, ಮೀರಾ ಶಿವಲಿಂಗಯ್ಯ, ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಹುಸ್ಕೂರು ಕೃಷ್ಣೇಗೌಡ, ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಎಂ.ಬಿ.ರಮೇಶ್, ದರಸಗುಪ್ಪೆ ಧನಂಜಯ ಇತರರಿದ್ದರು.

ಅಧ್ಯಕ್ಷ ಸಿಕೆಆರ್ ನೇತೃತ್ವದಲ್ಲೇ ಸಮ್ಮೇಳನ: ದಿಢೀರ್ ಅನಾರೋಗ್ಯಕ್ಕೆ ಒಳಗಾಗಿ ಹಲವು ತಿಂಗಳಿನಿಂದ ಹಾಸಿಗೆ ಹಿಡಿದಿರುವ ಜಿಲ್ಲಾ ಕಸಾಪ ಅಧ್ಯಕ್ಷ ಸಿ.ಕೆ.ರವಿಕುಮಾರ ಚಾಮಲಾಪುರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬಹುದೆನ್ನುವ ಮಾತು ಕೇಳಿಬಂದಿತ್ತು. ಆದರೆ ಡಾ.ಮಹೇಶ್ ಜೋಷಿ, ರವಿಕುಮಾರ್ ಅಧ್ಯಕ್ಷತೆಯಲ್ಲಿಯೇ ಸಮ್ಮೇಳನ ಆಯೋಜನೆಗೊಳ್ಳಲಿದೆ ಎನ್ನುವ ಮೂಲಕ ಎಲ್ಲದಕ್ಕೂ ಅಂತ್ಯಹಾಡಿದರು.
ಸಿ.ಕೆ.ರವಿಕುಮಾರ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಅವರ ಆರೋಗ್ಯ ಸುಧಾರಣೆಗೆ ದೀರ್ಘಾವಧಿ ಸಮಯ ಬೇಕಿದ್ದು, ಅವರ ಅನುಪಸ್ಥಿತಿಯಲ್ಲಿ ಜಿಲ್ಲಾ ಘಟಕ ಯಾವ ರೀತಿ ಕಾರ್ಯನಿರ್ವಹಿಸಬೇಕೆಂಬ ಬಗ್ಗೆ ತಿದ್ದುಪಡಿ ತರಲಾಗಿದ್ದು, ಇದಕ್ಕೆ ಸರ್ಕಾರದ ಅಂಗೀಕಾರವೂ ದೊರಕಿದೆ. ಪರಿಷತ್ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಲು ಅಧ್ಯಕ್ಷರಿಂದ ಸಾಧ್ಯವಾಗದ ಕಾರಣ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಉಸ್ತುವಾರಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಉಪ ಸಮಿತಿ ರಚನೆ ಮಾಡಲಾಗುವುದು ಎಂದರು.
ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಯುವ ಜಿಲ್ಲೆಯ ಅಧ್ಯಕ್ಷರ ಸ್ಥಾನ ತೆರವಾಗಿದ್ದಲ್ಲಿ, ಅನಾರೋಗ್ಯಕ್ಕೆ ಒಳಗಾಗಿದ್ದರೆ, ಮರಣ ಹೊಂದಿದ್ದರೆ, ಪರಿಷತ್ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸಲು ಸಮರ್ಥರಾಗಿರದಿದ್ದರೆ ಅಂತಹ ಸಂದರ್ಭಗಳಲ್ಲಿ ನಿಯಮಾನುಸಾರ ಎಲ್ಲ ಕಾರ್ಯಕ್ರಮಗಳನ್ನು ನಿರ್ವಹಿಸಲು ಸಮಿತಿ ರಚಿಸಲಾಗಿದ್ದು, ಕೇಂದ್ರ ಕಸಾಪ ಅಧ್ಯಕ್ಷರ ಉಸ್ತುವಾರಿಯಲ್ಲೇ ನಡೆಯುವಂತೆ ತಿದ್ದುಪಡಿ ತರಲಾಗಿದೆ. ರವಿಕುಮಾರ ಆರೋಗ್ಯ ಸುಧಾರಣೆಗೆ ದೀರ್ಘಾವಧಿ ಸಮಯ ತೆಗೆದುಕೊಳ್ಳುವುದಾಗಿ ವೈದ್ಯರು ಹೇಳುತ್ತಿದ್ದಾರೆ. ಹೀಗಾಗಿ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಪರಿಷತ್ತಿನ ಕಾರ್ಯಕ್ರಮಗಳನ್ನು ಸಮರ್ಥವಾಗಿ ಮುನ್ನಡೆಸುವುದಕ್ಕೆ ಕಾನೂನಾತ್ಮಕ ನಡೆ ಅನುಸರಿಸುವುದು ಅವಶ್ಯವಾಗಿದೆ. ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಜಿಲ್ಲಾ ಘಟಕ ಯಾವ ರೀತಿ ಕಾರ್ಯನಿರ್ವಹಿಸಬೇಕೆಂಬ ಬಗ್ಗೆ ತಿದ್ದುಪಡಿ ತರಲಾಗಿದ್ದು, ಇದಕ್ಕೆ ಸರ್ಕಾರದ ಅಂಗೀಕಾರ ದೊರಕಿದೆ ಎಂದು ತಿಳಿಸಿದರು.
ಸಮಿತಿ ರಚನೆ ಚುನಾಯಿತ ಜಿಲ್ಲಾಧ್ಯಕ್ಷರಿಗೆ ಅಗೌರವವನ್ನು ತರುವುದಿಲ್ಲ. ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಕಾರ್ಯಕಾರಿ ಸಮಿತಿಯನ್ನೇ ಮುಂದುವರೆಸಿಕೊಂಡು ಹೋಗಲಾಗುವುದು. ಇದರಲ್ಲಿ ಯಾವ ಬದಲಾವಣೆಯನ್ನೂ ಮಾಡುವುದಿಲ್ಲ. ಜಿಲ್ಲಾಧ್ಯಕ್ಷರ ಅನುಪಸ್ಥಿತಿಯಲ್ಲಿ ಬೇರೊಬ್ಬರನ್ನು ಅವರ ಸ್ಥಾನಕ್ಕೆ ನಾಮ ನಿರ್ದೇಶನ ಮಾಡುವುದಕ್ಕೆ ಅವಕಾಶವಿರುವುದಿಲ್ಲ. ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದವರನ್ನೂ ನೇಮಕ ಮಾಡುವುದಕ್ಕೆ ಸಾಧ್ಯವಿರುವುದಿಲ್ಲ. ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಸಮಿತಿ ರಚನೆ ಮಾಡುವುದಕ್ಕೆ ಅವಕಾಶವಿರುತ್ತದೆ. ರಾಜ್ಯಾಧ್ಯಕ್ಷರು ರಾಜ್ಯದಿಂದ ಮತ್ತು ಜಿಲ್ಲಾ ಘಟಕದಿಂದ ಎರಡು ಮತ ಪಡೆದಿರುವುದರಿಂದ ಅವರಿಗಷ್ಟೇ ಸಮಿತಿ ರಚನೆಯ ಅಧಿಕಾರವಿರುತ್ತದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಲಾಗುವುದು ಎಂದು ಮಹೇಶ್ ಜೋಷಿ ಸ್ಪಷ್ಟಪಡಿಸಿದರು.
ಮುಂದಿನ ವರ್ಷ ಸಮ್ಮೇಳನ: ಮುಂದಿನ ವರ್ಷ ಮಂಡ್ಯದಲ್ಲೇ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ. ಆದರೆ, ಯಾವ ತಿಂಗಳಿನಲ್ಲಿ ನಡೆಸಿದರೆ ಸೂಕ್ತ ಎಂಬ ಬಗ್ಗೆ ಅಭಿಪ್ರಾಯ ಸಂಗ್ರಹಿಸಿ ಶೀಘ್ರದಲ್ಲೇ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ನಾಡೋಜ ಡಾ.ಮಹೇಶ್ ಜೋಷಿ ಹೇಳಿದರು.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು 2024ರ ಜನವರಿಯಲ್ಲಿ ನಡೆಸುವುದಕ್ಕೆ ಮೊದಲು ನಿರ್ಧರಿಸಲಾಗಿತ್ತು. ಸಮ್ಮೇಳನ ನಡೆಯುವ ಸ್ಥಳದ ಪರಿಶೀಲನೆಯನ್ನೂ ನಡೆಸಲಾಗಿತ್ತು. ಆದರೆ, ಬರಪರಿಸ್ಥಿತಿ ಎದುರಾಗಿರುವುದರಿಂದ ಈ ಸಮಯದಲ್ಲಿ ಸಮ್ಮೇಳನ ನಡೆಸುವುದು ಸೂಕ್ತವಲ್ಲ ಎಂದು ತೀರ್ಮಾನಿಸಿ ಮಂಡ್ಯದಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನವನ್ನು ಮುಂದೂಡಲಾಗಿದೆಯೇ ವಿನಃ ಮಂಡ್ಯದಿಂದ ಸಮ್ಮೇಳನವನ್ನು ರದ್ದುಪಡಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಮುಂದಿನ ದಿನಗಳಲ್ಲಿ ಚುನಾವಣೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಬರಲಿವೆ. ಆನಂತರ ಮಳೆಗಾಲ ಶುರುವಾಗಲಿದೆ. ಇದೆಲ್ಲದರ ನಡುವೆ ಸಮ್ಮೇಳನವನ್ನು ಯಾವ ತಿಂಗಳಿನಲ್ಲಿ ನಡೆಸಿದರೆ ಸೂಕ್ತ ಎಂಬ ಬಗ್ಗೆ ಎಲ್ಲರಿಂದ ಅಭಿಪ್ರಾಯವನ್ನು ಸಂಗ್ರಹಿಸಬೇಕಿದೆ. ಎಲ್ಲರೂ ಸಮ್ಮೇಳನಕ್ಕೆ ಸೂಕ್ತವಾದ ತಿಂಗಳನ್ನು ಸೂಚಿಸಿದರೆ ಮುಖ್ಯಮಂತ್ರಿ ಮತ್ತು ಉಸ್ತುವಾರಿ ಸಚಿವರೊಂದಿಗೆ ಚರ್ಚಿಸುವುದಕ್ಕೆ ಅನುಕೂಲವಾಗಲಿದೆ. ಉತ್ತರ ಕರ್ನಾಟಕದಲ್ಲಿ ಹೆಚ್ಚು ಜನರು ಸೇರುವುದಕ್ಕೆ ಸಾಹಿತ್ಯ ಸಮ್ಮೇಳನಕ್ಕೂ ಮುನ್ನ ನಡೆಸಿದ ಭುವನೇಶ್ವರಿ ಯಾತ್ರೆ ಕಾರಣವಾಯಿತು. ಕಳೆದ ವರ್ಷ ಜನವರಿ ತಿಂಗಳಿನಲ್ಲಿ ಆರಂಭಿಸಿದ್ದರಿಂದ ರಥ ಎಲ್ಲಾ ಜಿಲ್ಲೆಗಳಲ್ಲೂ ಸಂಚರಿಸಿ ಕನ್ನಡಿಗರ ಮನಸ್ಸನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಅದನ್ನೇ ಮುಂದಿಟ್ಟುಕೊಂಡು ಇಲ್ಲಿಯೂ ಹೆಚ್ಚು ಜನರನ್ನು ಸೇರಿಸುವುದರೊಂದಿಗೆ ಐತಿಹಾಸಿಕ ಸಮ್ಮೇಳನವಾಗಿ ಮಾಡೋಣ ಎಂದು ಕರೆ ನೀಡಿದರು.