ಹಾವೇರಿ: ಹಾವೇರಿಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಸಬೇಕು ಎಂಬ ತೀರ್ಮಾನ ಈಗಾಗಲೇ ಆಗಿದೆ. ಅದರಂತೆ ಸಮ್ಮೇಳನ ನಡೆಯುತ್ತದೆ. ಕರೊನಾ ಇರುವುದರಿಂದ ಯಾವಾಗ ಮಾಡಬೇಕು ಎಂಬ ಕುರಿತು ಕಸಾಪ ಅಧ್ಯಕ್ಷರು, ಆರೋಗ್ಯ ಸಚಿವರು ಹಾಗೂ ಸಿಎಂ ಅಧ್ಯಕ್ಷತೆಯಲ್ಲಿ ಶೀಘ್ರ ಸಭೆ ನಡೆಸಿ ತೀರ್ವನಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರೊನಾ ಇನ್ನಷ್ಟು ಕಡಿಮೆಯಾದ ನಂತರ ಅಂದಾಜು ಎರಡರಿಂದ ಮೂರು ತಿಂಗಳಲ್ಲಿ ದಿನಾಂಕ ನಿಗದಿ ಮಾಡುತ್ತೇವೆ. ಈ ಬಾರಿಯ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲೇ ನಡೆಯುತ್ತದೆ. ಈ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದು ಸ್ಪಷ್ಟಪಡಿಸಿದರು.
ಶಿರಾ, ಆರ್ಆರ್ ನಗರದಲ್ಲಿ ದೊಡ್ಡ ಅಂತರದ ಜಯ: ಶಿರಾ ಮತ್ತು ಆರ್ಆರ್ ನಗರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಅತಿದೊಡ್ಡ ಅಂತರದಲ್ಲಿ ಗೆಲ್ಲುತ್ತಾರೆ. ಇದರೊಂದಿಗೆ ಸಿಎಂ ಯಡಿಯೂರಪ್ಪ ಅವರ ವರ್ಚಸ್ಸು ಮತ್ತು ಅವರ ಕೈ ಬಲಪಡಿಸುವ ಕೆಲಸವನ್ನು ಮತದಾರರು ಮಾಡುತ್ತಾರೆ ಎಂಬ ಭರವಸೆಯಿದೆ. ಶಿರಾ ಕ್ಷೇತ್ರದಲ್ಲಿ ಮಡ್ಲೂರ ಕೆರೆಯ ವಿಚಾರ ಚರ್ಚೆಯಾಗುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ಅವರು ನನ್ನ ಪ್ರಯತ್ನದಿಂದಲೇ ಕೆರೆಗೆ ನೀರು ಹರಿಸಲಾಗಿದೆ ಎಂದು ದಶಕದಿಂದ ಹೇಳುತ್ತಿದ್ದಾರೆ. ಆದರೆ, ಅವರು ಸಚಿವರಾಗಿದ್ದರೂ ನೀರು ತರಲು ಅವರಿಂದ ಆಗಲಿಲ್ಲ. ಸತ್ಯಾಂಶವೆಂದರೆ 2008ರಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರದ ಅವಧಿಯಲ್ಲಿ ನಾನು ನೀರಾವರಿ ಸಚಿವನಿದ್ದಾಗ ತಳಂಬೆಳ ಕೆರೆಯಿಂದ ಮಡ್ಲೂರ ಕೆರೆಗೆ 0.9 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. ನಂತರ 60 ಕೋಟಿ ರೂ. ವೆಚ್ಚದಲ್ಲಿ 10 ಕಿಮೀ ಕಾಲುವೆ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಕೇಂದ್ರ ಸರ್ಕಾರ ರಾಜ್ಯದ ಪಾಲಿನ ನೀರನ್ನು ನಮಗೆ ಕೊಟ್ಟಿದೆ. ಅದನ್ನು ಜಯಚಂದ್ರ ಅವರು ತಾನೇ ನೀರು ಹರಿಸಿದ್ದೇನೆ ಎನ್ನುವುದು ಸರಿಯಲ್ಲ. ಬರಪೀಡಿತವಾಗಿರುವ ಶಿರಾ ಕ್ಷೇತ್ರಕ್ಕೆ ಅಪ್ಪರ್ ಭದ್ರಾ ಪ್ರಾಜೆಕ್ಟ್ನಿಂದ ಶಿರಾಕ್ಕೆ ನೀರು ತರಲು ನಮ್ಮ ಸರ್ಕಾರ ಪ್ರಯತ್ನಿಸಿದೆ. ಬದ್ಧತೆಯಿಂದ ಕೆಲಸ ಮಾಡಲಾಗುತ್ತಿದೆ. ಕಾಂಗ್ರೆಸ್ ಹಾಗೂ ನಂತರದ ಮೈತ್ರಿ ಸರ್ಕಾರದ 7 ವರ್ಷಗಳ ಅವಧಿಯಲ್ಲಿ ಶಿರಾಕ್ಕೆ ನೀರು ಕೊಡುವ ಕೆಲಸ ಆಗಿಲ್ಲ. ಜಯಚಂದ್ರ ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ಗಡಿಭಾಗದಲ್ಲಿ ಮತ್ತೆ ಎಂಇಎಸ್ ಪುಂಡಾಟಿಕೆ ವಿಚಾರದಲ್ಲಿ ಕರಾಳ ದಿನಾಚರಣೆಗೆ ಅವಕಾಶ ನೀಡದಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ. ಕರೊನಾ ಹಿನ್ನೆಲೆಯಲ್ಲಿ ರಾಜ್ಯೋತ್ಸವವನ್ನೇ ಸರಳವಾಗಿ ಆಚರಿಸಲಾಗುತ್ತಿದೆ. ಇಂತಹ ಸಮಯದಲ್ಲಿ ಪುಂಡಾಟಿಕೆಗೆ ಅವಕಾಶ ನೀಡುವುದಿಲ್ಲ ಎಂದರು.
ಮುಂದಿನ ಚುನಾವಣೆಯೂ ಬಿಎಸ್ವೈ ನೇತೃತ್ವ: ರಾಜ್ಯದಲ್ಲಿ ಸಿಎಂ ಬದಲಾವಣೆ ಮುಗಿದ ವಿಚಾರ. ಈಗಾಗಲೇ ಹೈಕಮಾಂಡ್ ಮತ್ತು ರಾಜ್ಯಾಧ್ಯಕ್ಷರು ಸ್ಪಷ್ಟನೆ ನೀಡಿದ್ದಾರೆ. ಯಡಿಯೂರಪ್ಪ ಅವರ ನೇತೃತ್ವದಲ್ಲಿಯೇ ಕಳೆದ ಬಾರಿ ಚುನಾವಣೆ ನಡೆದು ಸರ್ಕಾರವೂ ಅಧಿಕಾರಕ್ಕೆ ಬಂದಿದೆ. ಈ ಅವಧಿಯಲ್ಲಿ ಅವರು ಸಂಪೂರ್ಣವಾಗಿ ಮುಖ್ಯಮಂತ್ರಿಯಾಗಿಯೇ ಇರ್ತಾರೆ. ಮುಂದಿನ ಚುನಾವಣೆಯ ನೇತೃತ್ವವನ್ನು ಯಡಿಯೂರಪ್ಪ ಅವರೇ ವಹಿಸುತ್ತಾರೆ. ಈ ಕುರಿತು ಸಂಪೂರ್ಣವಾಗಿ ತೀರ್ವನವೂ ಆಗಿದೆ ಎಂದು ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.