ಜಿಲ್ಲೆ

ಪ್ರಬಂಧ ಸ್ಪರ್ಧೆಗೆ ಪೂರ್ವಭಾವಿ ಸಭೆ

ಎ. ಆರ್. ರಘುರಾಮ

ಹಿರೀಸಾವೆ : ಹಿರೀಸಾವೆ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ಮಾ. 26 ರಂದು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಕಸಾಪ ಹೋಬಳಿ ಘಟಕದ ಅಧ್ಯಕ್ಷ ಪ್ರಮೋದ್ ಹೇಳಿದರು.
ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿ, ಬೆಳಗ್ಗೆ 10 ಗಂಟೆಗೆ ಪ್ರಬಂಧ ಸ್ಪರ್ಧೆ ಪ್ರಾರಂಭವಾಗಲಿದೆ. ನಂತರ ವೇದಿಕೆ ಕಾರ್ಯಕ್ರಮಗಳು ನಡೆಯಲಿವೆ ಎಂದರು. ಪ್ರಬಂಧ ಸ್ಪರ್ಧೆಗೆ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ.
‘ಆನ್ ಲೈನ್ ಬೆಟ್ಟಿಂಗ್ ದಂಧೆಯಿಂದ ಸಮಾಜದ ಮೇಲಾಗುವ ಮಾರಕ ಪರಿಣಾಮಗಳು ಮತ್ತು ನಿವಾರಣೋಪಾಯಗಳು’ ಎಂಬ ವಿಷಯವನ್ನು ಸ್ಪರ್ಧೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಸ್ಪರ್ಧೆಗೆ ಒಟ್ಟು 5 ನಗದು ಬಹುಮಾನಗಳು ಹಾಗೂ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಗುವುದು. ಕಸಾಪ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶ್‌ಗೌಡ, ತಾಲೂಕು ಅಧ್ಯಕ್ಷ ಎಚ್.ಎನ್.ಲೋಕೇಶ್, ಹಿರೀಸಾವೆ ಘಟಕದ ನಿಕಟ ಪೂರ್ವ ಅಧ್ಯಕ್ಷ ಪ್ರೊ. ಎಚ್.ಪಿ.ಶಂಕರ್ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು. ಸಭೆಯಲ್ಲಿ ಪದಾಧಿಕಾರಿಗಳಾದ ಎಚ್.ಈ.ಬೋರಣ್ಣ, ಗೋವಿಂದರಾಜ್, ಹರೀಶ್, ಕೆ.ಪಿ.ಪುಟ್ಟರಾಜು, ಬಾಬು ಹಾಗೂ ಇತರರು ಇದ್ದರು.