ಮಡಿಕೇರಿ:
ಬುಧವಾರ ನಿಧನರಾದ ಕನ್ನಡ ಸಾಹಿತ್ಯ ಲೋಕದ ಮೇರು ಸಾಹಿತಿ ಎಸ್. ಎಲ್. ಭೈರಪ್ಪ ಅವರಿಗೆ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶುಕ್ರವಾರ ಶ್ರದ್ದಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಎಸ್.ಎಲ್. ಭೈರಪ್ಪ ನಿಧನದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ಕನ್ನಡದ ಪ್ರಮುಖ ಕಾದಂಬರಿಕಾರ, ತತ್ವಜ್ಞಾನಿ ಮತ್ತು ಚಿಂತಕರಾಗಿದ್ದರು. ಅವರ ಕಾದಂಬರಿಗಳು ಭಾರತೀಯ ಭಾಷೆಗಳಿಗೆ ಅನುವಾದಗೊಂಡಿದ್ದು, ವ್ಯಾಪಕ ಜನಪ್ರಿಯತೆ ಗಳಿಸಿವೆ. ಕಾದಂಬರಿ, ವೈಚಾರಿಕ ಸಾಹಿತ್ಯ, ಬಂಡಾಯ ಸಾಹಿತ್ಯ, ಇವುಗಳ ರಚನೆಯಲ್ಲಿ ತೊಡಗಿಸಿಕೊಂಡಿದ್ದ ಎಸ್ ಎಲ್ ಭೈರಪ್ಪ ಪ್ರಾತಃಸ್ಮರಣೀಯರು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹ ನಿರ್ದೇಶಕ ಕುಮಾರ್ ಮಾತನಾಡಿ ಎಸ್.ಎಲ್. ಭೈರಪ್ಪ ಅವರು ಕನ್ನಡ ಸಾಹಿತ್ಯದ ಮೇರು ಸಾಹಿತಿಗಳಾಗಿದ್ದು ಸಾಹಿತ್ಯ ಪ್ರಪಂಚದ ವಜ್ರದಂತಿದ್ದರು ಎಂದರು.
ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧಿಕಾರಿ ಕೆ.ವಿ. ಉಮೇಶ್ ಮಾತನಾಡಿ ಕನ್ನಡ ಸಾಹಿತ್ಯದಲ್ಲಿ ಮೊದಲ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದ ಎಸ್.ಎಲ್. ಭೈರಪ್ಪನವರು ಸರಸ್ವತಿ ಪುತ್ರರು. ಅವರ ಎರಡು ಕಾದಂಬರಿಗಳು ಚಲನಚಿತ್ರ ಕೂಡ ಆಗಿದೆ ಎಂದರು.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಾಸು ರೈ, ಜಿಲ್ಲಾ ಗೌರವ ಕಾರ್ಯದರ್ಶಿ ರೇವತಿ ರಮೇಶ್, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷೆ ಕಡ್ಲೆರ ತುಳಸಿ ಮೋಹನ್, ಕೊಡಗು ಜಿಲ್ಲಾ ವಾರ್ತಾ ಇಲಾಖೆಯ ಉಪ ನಿರ್ದೇಶಕ ಚಿನ್ನಸ್ವಾಮಿ, ಸದಸ್ಯ ಅಜಯ್, ಕಚೇರಿ ಸಿಬ್ಬಂದಿ ರೇಣುಕಾ ಇದ್ದರು.