ಮಂಡ್ಯ: ಸಮಾಜದ ಅಭಿವೃದ್ಧಿಗೆ ಮಾಧ್ಯಮಗಳು ತಮ್ಮದೇ ಆದ ಕೊಡುಗೆ ನೀಡುತ್ತಿವೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅಭಿಪ್ರಾಯಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಜಿಲ್ಲಾ ಪ್ರೆಸ್ ಕ್ಲಬ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಮಹಿಳಾ ಸರ್ಕಾರಿ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಾಧ್ಯಮ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಬೇರೆಯವರು ಮಾತನಾಡುವುದಕ್ಕಿಂತ ಮಾಧ್ಯಮಗಳು ಮಾತನಾಡಿದರೆ ಅದನ್ನು ಎಲ್ಲರೂ ಗೌರವಿಸುತ್ತಾರೆ. ಮಾಧ್ಯಮಗಳು ಮಾತನಾಡಿದರೆ ಅದು ಎಲ್ಲಿ ಮುಟ್ಟಬೇಕೋ ಅಲ್ಲಿ ಮುಟ್ಟುತ್ತದೆ. ಅದಕ್ಕೆ ಸಂಬಂಧಿಸಿದವರು ಪ್ರತಿಕ್ರಿಯೆಯನ್ನು ಕೊಡಲೇಬೇಕಾಗಿರುತ್ತದೆ. ಆದ್ದರಿಂದ ಮಾಧ್ಯಮಗಳಿಗೆ ಇಂತಹ ಶಕ್ತಿ ಇದೆ ಎಂದು ಹೇಳಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಮಾತನಾಡಿ, ಪತ್ರಕರ್ತ ಕೇಳುವ ಅಭಿರುಚಿ ಬೆಳೆಸಿಕೊಳ್ಳಬೇಕು. ಮಂಡ್ಯದಂತಹ ಸೊಗಡಿನ ಜಿಲ್ಲೆಗಳಲ್ಲಿ ರೈತರ ಸಮಸ್ಯೆಗಳನ್ನು ಮಾಧ್ಯಮಗಳು ತಿಳಿಸುವ ಕೆಲಸ ಮಾಡಬೇಕು. ರೈತನ ಮುಖದಲ್ಲಿ ಮಂದಹಾಸ ಮೂಡಿದಾಗ ಮಾತ್ರ ಜಿಲ್ಲೆಯ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಇಂತಹ ಕಾರ್ಯಾಗಾರಗಳು ಬಹಳಷ್ಟು ವಿಚಾರಗಳನ್ನು ತಿಳಿಸಿಕೊಡುತ್ತವೆ. ಅವುಗಳನ್ನು ತಿಳಿದು ಅಳವಡಿಸಿಕೊಳ್ಳುವುದು ಪತ್ರಕರ್ತರಾದವರಿಗೆ ಮುಖ್ಯವಾಗಿರುತ್ತದೆ. ಜಿಲ್ಲೆಯಲ್ಲಿ ರಾಜಕೀಯವಾಗಿ ಜ್ಞಾನವಂತರಾಗಿರುತ್ತಾರೆ. ಇದರೊಂದಿಗೆ ಸಮಸ್ಯೆಗಳ ಬಗ್ಗೆಯೂ ತಿಳಿದುಕೊಳ್ಳುವುದು ಅಷ್ಟೇ ಮುಖ್ಯ ಎಂದು ಪ್ರತಿಪಾದಿಸಿದರು.
ಮಹಿಳಾ ಸರ್ಕಾರಿ ಕಾಲೇಜು ಪ್ರಾಂಶುಪಾಲ ಡಾ.ಆರ್. ದಶರಥ ಮಾತನಾಡಿ, ಸಮಾಜದ ಬಾಹ್ಯ ಲೋಕದ ಸಮಸ್ಯೆಗಳನ್ನು ತಿಳಿದು ಮೌಢ್ಯಗಳನ್ನು ತೊಲಗಿಸುವ ನಿಟ್ಟಿನಲ್ಲಿ ಸಾಮಾಜಿಕ ಹೊಣೆಗಾರಿಕೆ ಮೆರೆಯಬೇಕಿದೆ ಎಂದು ಸಲಹೆ ನೀಡಿದರು.
ಜಿಲ್ಲಾ ಪ್ರೆಸ್ ಕ್ಲಬ್ ಅಧ್ಯಕ್ಷ ಕೆ.ಶಂಭು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸಂಪಾದಕ ಮತ್ತು ವರದಿಗಾರರ ಸಂಘದ ಅಧ್ಯಕ್ಷ ಕಲಾವಿದ ವಿಷ್ಣು, ಪತ್ರಕರ್ತರಾದ ಕೌಡ್ಲೆ ಚನ್ನಪ್ಪ, ಎಂ.ಶಿವಕುಮಾರ್, ಗುರುಬಸವಯ್ಯ, ಎ.ಎಲ್. ಬಸವೇಗೌಡ, ವಾಗೀಶ್ ಚಂದ್ರಗುರು, ರಾಮಕೃಷ್ಣ, ದ.ಕೋ.ಹಳ್ಳಿ ಚಂದ್ರಶೇಖರ್, ನಾಗಯ್ಯ ಇತರರಿದ್ದರು.