ಜಿಲ್ಲೆ

ಕಾರವಾರ ಅರ್ಬನ್‌ ಬ್ಯಾಂಕ್‌ ಆರ್ಥಿಕ ವ್ಯವಹಾರಕ್ಕೆ ಆರ್‌ಬಿಐ ತಡೆ

ಕಾರವಾರ: ಮುಳುಗುವ ಹಂತದಲ್ಲಿರುವ ಇಲ್ಲಿನ ಕಾರವಾರ ಅರ್ಬನ್ ಬ್ಯಾಂಕ್ ಆರ್ಥಿಕ ವ್ಯವಹಾರಗಳನ್ನು ಜೂನ್ 12 ರಿಂದ ಸ್ಥಗಿತ ಮಾಡುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೂಚನೆ ನೀಡಿದೆ. ಅಲ್ಲದೇ ಈ ಬಗ್ಗೆ ಸಾರ್ವಜನಿಕ ಪ್ರಕಟಣೆ ನೀಡಿದೆ.
ಬ್ಯಾಂಕ್‌ನಲ್ಲಿ 54 ಕೋಟಿ ರೂ.ಆರ್ಥಿಕ ಅವ್ಯವಹಾರ ನಡೆದಿದೆ ಎಂದು ಕೆಲ ದಿನಗಳ ಹಿಂದೆ ಆಡಳಿತ ಮಂಡಳಿ ಘೋಷಿಸಿತ್ತು. ಅದಾದ ನಂತರ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟ ಗ್ರಾಹಕರು ಠೇವಣಿ ವಾಪಸ್ ಪಡೆಯಲು ಮುಗಿಬಿದ್ದಿದ್ದರು. ಸಹಕಾರ ಸಂಘಗಳ ಜಂಟಿ ನಿಬಂಧಕರು ಬ್ಯಾಂಕ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು, ಇಷ್ಟೆಲ್ಲ ಬೆಳವಣಿಗೆಗಳ ಬಳಿಕ ಆರ್‌ಬಿಐ ಬ್ಯಾಂಕ್‌ಗೆ ಸೂಚನೆ ನೀಡಿದೆ.
ಬ್ಯಾಂಕ್ 2022-23 ನೇ ಸಾಲಿನಲ್ಲಿ ಆಡಿಟ್ ಮಾಡಿಲ್ಲ. ಠೇವಣಿದಾರರಿಗೆ ಕೊಡುವಷ್ಟು ಲಿಕ್ವಿಡಿಟಿ ಹಣವನ್ನೂ ಹೊಂದಿಲ್ಲ. ಇದರಿಂದ ಈ ಬಗ್ಗೆ ಆರ್‌ಬಿಐ ಮುಂದಿನ 6 ತಿಂಗಳವರೆಗೆ ಬ್ಯಾಂಕ್ ಯಾವುದೇ ಠೇವಣಿ ಸಂಗ್ರಹಿಸುವAತಿಲ್ಲ. ವಿತರಿಸುಂತಿಲ್ಲ. ಸಾಲಗಳನ್ನು ನೀಡುವಂತಿಲ್ಲ. ಆಸ್ತಿಗಳ ಮಾರಾಟ ಅಥವಾ ಯಾವುದೇ ವ್ಯವಹಾರ ಮಾಡುವಂತಿಲ್ಲ. ಉಳಿತಾಯ ಹಾಗೂ ಚಾಲ್ತಿ ಖಾತೆಯ ಹಣವನ್ನು ತೆಗೆಯುವಂತಿಲ್ಲ. ಸಾಲದ ಕಂತುಗಳನ್ನು ಪಡೆಯಬಹುದು. ಸಿಬ್ಬಂದಿಯ ವೇತನ, ವಿದ್ಯುತ್ ಬಿಲ್, ಬಾಡಿಗೆ ಮುಂತಾದ ಅತ್ಯಾವಶ್ಯಕ ವ್ಯವಹಾರಗಳನ್ನು ಬಿಟ್ಟು ಬೇರೇನೂ ಮಾಡುವಂತಿಲ್ಲ ಎಂದು ಸೂಚನೆ ನೀಡಲಾಗಿದೆ ಎಂದು ಆರ್‌ಬಿಐ ಚೀಫ್ ಜನರಲ್ ಮ್ಯಾನೇಜರ್ ಪುನೀತ್ ಪಂಚೋಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬ್ಯಾಂಕ್ ಠೇವಣಿಗಳಿಗೆ ಡಿಫಾಸಿಟ್ ಇನ್ಶುರೆನ್ಸ್ ಆ್ಯಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್‌ನಲ್ಲಿ ಇನ್ಶುರೆನ್ಸ್ ಹೊಂದಿದ್ದು, ಎಲ್ಲ ಪರಿಶೀಲನೆಗಳ ನಂತರ ಠೇವಣಿದಾರರು 5 ಲಕ್ಷದವರೆಗಿನ ಠೇವಣಿಗಳಿಗೆ ಇನ್ಶುರೆನ್ಸ್ ಕ್ಲೈಮ್‌ ಪಡೆಯಲು ಅರ್ಹರಾಗಿರುತ್ತಾರೆ. ಬ್ಯಾಂಕ್‌ನ ಶೇ.99 ರಷ್ಟು ಠೇವಣಿದಾರರು ಈ ಹಣ ಪಡೆಯಲು ಅರ್ಹರಾಗಿದ್ದಾರೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಲಾಗಿದೆ.