ಕಾರವಾರ: ವರುಣನ ರೌದ್ರಾವತಾರಕ್ಕೆ ಉತ್ತರ ಕನ್ನಡ ನಲುಗಿದೆ. ಅನಾಹುತಗಳ ಸರಮಾಲೆಯೇ ಸೃಷ್ಟಿಯಾಗಿದೆ.
ಕಾರವಾರದ ಚೆಂಡಿಯಾ ಬಳಿ ನೂರಾರು ಮನೆಗಳಿಗೆ ನೀರು ನುಗ್ಗಿದೆ. ವಸ್ತ್ರ, ಆಹಾರ ಸಾಮಗ್ರಿಗಳು ರಾಡಿ ನೀರಿನಲ್ಲಿ ತೊಯ್ದು ಹೋಗಿವೆ.
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನೀರು ನಿಂದಿದ್ದು, 8 ತಾಸಿನಿಂದ ವಾಹನ ಸಂಚಾರ ಬಂದಾಗಿದೆ. ಬಸ್ ಗಳ ಓಡಾಟ ಸ್ಥಗಿತವಾಗಿದ್ದು, ದಿನನಿತ್ಯದ ಉದ್ಯೋಗಕ್ಕೆ ತೆರಳುವವರಿಗೆ ಸಮಸ್ಯೆ ಉಂಟಾಗಿದೆ. ಹಾಲು, ಪತ್ರಿಕೆ ವಾಹನಗಳೂ ಕಾರವಾರ ತಲುಪಲು ಸಾಧ್ಯವಾಗಿಲ್ಲ.
ಶಿರಸಿ ಕುಮಟಾ ರಾಷ್ಟ್ರೀಯ ಹೆದ್ದಾರಿ 766ಇ ದಲ್ಲಿ ಗುಡ್ಡ ಕುಸಿದಿದ್ದು ವಾಹನ ಸಂಚಾರ 7 ತಾಸಿನಿಂದ ಬಂದ್ ಆಗಿದೆ. ಹೊನ್ನಾವರ-ಸಾಗರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಜೆಸಿಬಿ ಮೂಲಕ ಮಣ್ಣು ತೆರವು ಮಾಡಲಾಗುತ್ತಿದೆ.
ಕುಮಟಾ ತಾಲೂಕಿನ ದೀವಗಿಯಲ್ಲಿ ಅಘನಾಶಿನಿ ನದಿಯು ತುಂಬಿ ಹರಿಯುತ್ತಿದ್ದು ಮಣಕೋಣ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರವನ್ನು ತೆರೆಯಲಾಗಿದೆ.