ಜಿಲ್ಲೆ

ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದುದು-ಮಂಕಾಳ ವೈದ್ಯ

Uttara Kannada - Subash Hegde

ಕುಮಟಾ: ಶಿಕ್ಷಕರ ವೃತ್ತಿಯು ಅತ್ಯಂತ ಪವಿತ್ರವಾದುದು. ಈ ಸಮಾಜದಲ್ಲಿ ಎಲ್ಲರಿಗೂ ದೊರೆಯದ  ಈ ಸೇವಾ ವೃತ್ತಿ  ಶಿಕ್ಷಕಕರಿಗೆ ಮಾತ್ರ ಲಭಿಸಿದೆ ಎಂದು ಬಂದರು, ಮೀನುಗಾರಿಕೆ, ಒಳನಾಡು ಜಲ ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಹೇಳಿದರು.

ಅವರು  ಶುಕ್ರವಾರ  ಕುಮಟಾದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಿವಿದ ಸಂಘಟನೆಗಳ ಸಹಯೋಗದಲ್ಲಿ ಶ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
 ಒಬ್ಬ ವ್ಯಕ್ತಿ  ಸಮಾಜದಲ್ಲಿ ಉತ್ತಮ ನಾಗರೀಕನಾಗಿದ್ದಾನೆ ಎಂದರೆ ಅದಕ್ಕೆ ಕಾರಣ ಆತನಿಗೆ ಶಿಕ್ಷಣ ನೀಡಿದ  ಶಿಕ್ಷಕರೇ ಆಗಿರುತ್ತಾರೆ. ಶಿಕ್ಷಕರು  ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ  ದೇಶವನ್ನು ನಿರ್ಮಿಸುವ ಶಿಲ್ಪಿಗಳಾಗಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ದಿನಕರ ಶೆಟ್ಟಿ ಮಾತನಾಡಿ,  ಶಿಕ್ಷಕರು ಎದುರಿಸುತ್ತಿರುವ  ಸಮಸ್ಯೆಗಳ ಬಗ್ಗೆ ಶಿಕ್ಷಣ ಸಚಿವರ  ಗಮನ ಸೆಳೆಯಲಾಗುವುದು  ಎಂದರು.
ಕಾರವಾರ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಗಳು ಕಳೆದ ಎರಡು ವರ್ಷಗಳಲ್ಲಿ ಉತ್ತಮ ಶೈಕ್ಷಣಿಕ ಪ್ರಗತಿ ಸಾಧಿಸುತ್ತಿವೆ. ಮಕ್ಕಳಲ್ಲಿ  ಉತ್ತಮ ಚಾರಿತ್ರ್ಯ ನಿರ್ಮಾಣ ಕಾರ್ಯ ಶಿಕ್ಷಕರಿಂದಲೇ ಆರಂಭವಾಗಲಿದ್ದು,  ಪುಸ್ತಕದ ಆಚೆಯ ಜ್ಞಾನದ ಬಗ್ಗೆ ಮಕ್ಕಳನ್ನು ಅಣಿಗೊಳಿಸುವ ಜವಾಬ್ದಾರಿ ಶಿಕ್ಷರ ಮೇಲಿದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರೀಯಾ ಹೇಳಿದರು.
ಉತ್ತಮ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಹಾಗೂ ಅಧಿಕಾರಿಗಳನ್ನು ಗೌರವಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ದೀಪನ್,  ಶಿಕ್ಷಣ ಇಲಾಖೆಯ ನಿರ್ದೇಶಕ ಈಶ್ವರ ನಾಯ್ಕ, ಡಯಟ್ ಪ್ರಾಚಾರ್ಯ  ಎನ್. ಅರ್. ಹೆಗಡೆ, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ  ಆನಂದ ಗಾಂವಕರ್, ಶಿಕ್ಷಕರ ಸಂಘದ ಪದಾಧಿಕಾರಿಗಳು ಮತ್ತಿತರರು ಇದ್ದರು. ಡಿಡಿಪಿಐ  ಲತಾ ನಾಯಕ ಸ್ವಾಗತಿಸಿದರು. ಬಿ. ಇ. ಒ ಉದಯ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.