ಕಾರವಾರ/Karwar: ತಾಲೂಕಾ ಭಂಡಾರಿ ಸಮಾಜೋನ್ನತಿ ಸಂಘ (ಮುದಗಾ-ಅರ್ಗಾ) ಗ್ರಾಮೀಣ ಘಟಕದ ದಶಮಾನೋತ್ಸವ ಕಾರ್ಯಕ್ರಮದ ನಿಮಿತ್ತ ನಡೆದ ಪ್ರತಿಭಾ ಪುರಸ್ಕಾರ, ಸತ್ಯನಾರಾಯಣ ಪೂಜೆ ಮತ್ತು ಸನ್ಮಾನ ಸಮಾರಂಭ ಅಮದಳ್ಳಿ ಶ್ರೀ ವೀರಗಣಪತಿ ಸಭಾಭವನದಲ್ಲಿ ರವಿವಾರ ವಿಜ್ರಂಭಣೆಯಿಂದ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ನಗರಸಭೆ ಅದ್ಯಕ್ಷ ರವಿರಾಜ ಅಂಕೋಲೆಕರ್ ಮಾತನಾಡಿ ಪ್ರತಿಯೊಂದು ಸಮಾಜದ ಅಭಿವೃದ್ದಿಯಲ್ಲಿ ಸಂಘಟನೆಯ ಪಾತ್ರ ಮಹತ್ವದ್ದಾಗಿದೆ. ಸಂಘಟನೆಯಿಂದ ಸಮುದಾಯದ ಸದಸ್ಯರ ಪರಿಚಯದೊಂದಿಗೆ ಸಂಬಂಧ ಬೆಳೆಯಲು ಸಹಕಾರಿಯಾಗುತ್ತದೆ.
ಹೀಗಾಗಿ ಹಿರಿಯರು, ಯುವಕರು ಒಂದಾಗಿ ಸಂಘಟನೆಯಲ್ಲಿ ಪಾಲ್ಗೊಂಡು ಸಮುದಾಯದ ಅಭಿವೃದ್ದಿಯಲ್ಲಿ ತೊಡಗಿಸಿಕೊಂಡು ಸಂಘವನ್ನು ಬಲಪಡಿಸಬೇಕು ಎಂದರು. ಮುಖ್ಯ ಅಥಿತಿಗಳಾಗಿ ಉಪಸ್ಥಿತರಿದ್ದ ಶಿಕ್ಷಣ ಇಲಾಖೆ ಕ್ಷೇತ್ರ ಸಮನ್ವಯಾಧಿಕಾರಿ ಸುಜಾತಾ ಜಾವಕರ ಮಾತನಾಡಿ ಸಂಘಟನೆಯನ್ನು ಬಲಪಡಿಸುವುದರ ಮೂಲಕ ಸಮುದಾಯದ ಮಕ್ಕಳಿಗೆ ಶಿಕ್ಷಣ, ಉದ್ಯೋಗಗಳ ಬಗ್ಗೆ ಚಿಂತನೆ ಮಾಡಬೇಕಾಗಿದೆ.
ಟಿವಿ, ಮೊಬೈಲ್‌ಗಳಿಂದ ಇಂದು ಮಕ್ಕಳ ಶಿಕ್ಷಣ ಹಾಳಾಗುತ್ತಿದೆ. ಇದರ ಬದಲಾಗಿ ಶಿಕ್ಷಣದ ಜೊತೆ ಸಾಹಿತ್ಯ, ಕಲೆ, ಕ್ರೀಡಾ ಕ್ಷೇತ್ರಗಳಲ್ಲಿ ಮಕ್ಕಳು ತೊಡಗಿಸಿಕೊಳ್ಳುವಂತಾಗಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರಿ ಸಮಾಜೋನ್ನತಿ ಸಂಘದ ತಾಲುಕಾ ಅಧ್ಯಕ್ಷ ಮೋಹನ ಕಿಂದಳಕರ ವಹಿಸಿದ್ದರು. ಉದ್ದಿಮೆದಾರ ಮಾರುತಿ ಪಾಟೀಲ್, ಕುಮಟಾ ಡಯಟ್‌ನ ಪರಮೇಶ್ವರ ದೇಶಭಂಡಾರಿ, ನ್ಯಾಯವಾದಿ ಜಗದೀಶ ಬಿರ್ಕೋಡಿಕರ್, ಉ.ಕ ಜಿ. ಭಂಡಾರಿ ಸಮಾಜೋನ್ನತಿ ಸಂಘದ ಜಿಲ್ಲಾಧ್ಯಕ್ಷ ಅರುಣ ಸಿ. ಮಣಕೀಕರ ಮಾತನಾಡಿದರು.
ಇದೇ ಸಂದರ್ಭದಲ್ಲಿ ನಿವೃತ್ತ ಸೈನಿಕ ಗುರುದಾಸ ಎಸ್. ಕೊಳಂಬಕರ್, ಹಾಗೂ ಸಮಾಜದ ಹಿರಿಯರಾದ ರಮೇಶ ಜಿ. ತೆಂಡೂಲ್ಕರ್, ಮಾಲಾ ಎನ್.ಮಾಂಜ್ರೇಕರ್, ಇತರೆ ಸಮಾಜದ ವತಿಯಿಂದ ಪತ್ರಕರ್ತ ಪ್ರಶಾಂತ ಎಸ್. ಮಹಾಲೆ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ವೇದಿಕೆಯಲ್ಲಿ Karwar ನಗರಸಭೆ ಮಾಜಿ ಉಪಾಧ್ಯಕ್ಷೆ ಛಾಯಾ ಜಾವಕರ, ಸಮಾಜದ ಪ್ರಮುಖರಾದ ನಾಗರಾಜ ನಾಯಕ ಶಿರಸಿ, ಶರದ್ ಪಡುವಲ್ಕರ್ ಗೋವಾ, ಮೋಹನ್ ಕಲ್ಗುಟ್ಕರ್ ಗೋವಾ, ಶಂಕರ್ ದೇಶಭಂಡಾರಿ, ಮಹಾದೇವ ಫೆಡ್ನೇಕರ್, ರಮೇಶ ಭಂಡಾರಿ ಕುಮಟಾ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು Karwar ಗ್ರಾಮೀಣ ಘಟಕದ ಅಧ್ಯಕ್ಷ ಸುಧಾಕರ ಮಹೇಕರ್ ಸ್ವಾಗತಿಸಿದರು. ಅಮೃತಾ, ಶಾಶ್ವತಾ ಹಾಗೂ ರಾಘವೇಂದ್ರ ನಿರೂಪಿಸಿದರು. ರೇಖಾ ತೆಂಡೂಲ್ಕರ್ ವಂದಿಸಿದರು.